×
Ad

ಕನ್ನಡದ ಕೆಲಸಗಳಲ್ಲಿ ನಮ್ಮ ಸರಕಾರ ಹಿಂದೆ ಬೀಳುವುದಿಲ್ಲ: ಸಿಎಂ ಸಿದ್ದರಾಮಯ್ಯ

Update: 2025-07-17 21:09 IST

Photo: X/@siddaramaiah

ಬೆಂಗಳೂರು: ಕನ್ನಡ-ಸಂಸ್ಕೃತಿ, ಸಾಹಿತ್ಯದ ಕೆಲಸದಲ್ಲಿ ನಮ್ಮ ಸರಕಾರ ಹಿಂದೆ ಬೀಳುವುದಿಲ್ಲ. ಇನ್ನೂ ಹೆಚ್ಚಿನ ಪ್ರೋತ್ಸಾಹ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಜೀವಮಾನ ಸಾಧನೆಯ ವಿವಿಧ ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಶಸ್ತಿಗಳನ್ನು ನಿರೀಕ್ಷಿಸದೇ ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುವ ಕೆಲಸವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಾಡುತ್ತಿದೆ. ಇದರ ಅಂಗವಾಗಿ 18ಮಂದಿ ಸಾಧಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿದ್ದೇವೆ. ಇದರಲ್ಲಿ ಭಗವಾನ್ ಮಹಾವೀರ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿಗೆ 10 ಲಕ್ಷ ರೂ. ನೀಡಲಾಗುತ್ತಿದೆ, ಉಳಿದ ಪ್ರಶಸ್ತಿಗಳಿಗೆ 5ಲಕ್ಷ ರೂ. ನೀಡಲಾಗುತ್ತಿದೆ ಎಂದರು.

ಪ್ರಶಸ್ತಿ ಪುರಸ್ಕೃತರ ಸಾಧನೆಗೆ ಸರಕಾರ ನೀಡುವ ಹಣ ದೊಡ್ಡದಲ್ಲ. ಅವರ ಸಾಧನೆ ದೊಡ್ಡದು ಎಂದರು. 2 ಸಾವಿರ ವರ್ಷಗಳ ಇತಿಹಾಸ ಇರುವ, ಹಳೆಯ ದ್ರಾವಿಡ ಭಾಷೆಯಾದ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದರು.

ನಾನು ರಾಜ್ಯದ ಮೊದಲ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿದ್ದೆ, ನಾನು ಸಾಹಿತ್ಯದ ವಿದ್ಯಾರ್ಥಿ ಅಲ್ಲ. ಆದರೆ ಕನ್ನಡ ಸಾಹಿತ್ಯ, ಸಂಸ್ಕøತಿಯನ್ನು ಅಪಾರವಾಗಿ ಪ್ರೀತಿಸುವವನು. ಕನ್ನಡ ಕರ್ನಾಟಕದಲ್ಲಿ ಸಾರ್ವಭೌಮ ಭಾಷೆ ಆಗಬೇಕು ಎನ್ನುವ ದಿಕ್ಕಿನಲ್ಲಿ ಬದ್ಧತೆ ಇಟ್ಟುಕೊಂಡು ನಾನು ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಂದು ಇದ್ದ ಕನ್ನಡ ಕಾವಲು ಸಮಿತಿಯೇ, ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದೆ. ಈಗ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಡಾ.ಎಲ್.ಹನುಮಂತಯ್ಯ ಅವರಿಗೆ ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿ, ಕೆ.ರಾಜಕುಮಾರ್ ಅವರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಪಂಡಿತ ರತ್ನ ಶಾಂತಿರಾಜ ಶಾಸ್ತ್ರಿ ಟ್ರಸ್ಟ್‍ಗೆ ಭಗವಾನ್ ಮಹಾವೀರ ಅಂತರ್‍ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಬಸಪ್ಪ ಎಚ್.ಭಜಂತ್ರಿ ಅವರಿಗೆ ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಬೇಗಂ ಪರ್ವೀನ್ ಸುಲ್ತಾನಾ ಅವರಿಗೆ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 18 ಜನರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಮತ್ತಿತರರು ಉಪಸ್ಥಿತರಿದ್ದರು.

‘ಹಿಂದಿನ ಸರಕಾರ ವಿವಿಧ ಪ್ರಶಸ್ತಿಗಳ ಸಾಧಕರನ್ನು ಆಯ್ಕೆ ಮಾಡಿದ್ದರೂ, ಪ್ರಶಸ್ತಿಯನ್ನು ನೀಡಿರಲಿಲ್ಲ. ಆದರೆ ನಮ್ಮ ಸರಕಾರ ಬಂದ ಕೂಡಲೇ ಬಾಕಿ ಉಳಿಸಿದ್ದ ಪ್ರಶಸ್ತಿಗಳನ್ನ ಪ್ರದಾನ ಮಾಡಲಾಯಿತು. ಆದರೆ ನಾವು ಪ್ರಶಸ್ತಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ ಹಿಂದಿನ ಸರಕಾರ ಘೋಷಣೆ ಮಾಡಿದವರಿಗೆ ಪ್ರಶಸ್ತಿಗಳನ್ನ ವಿತರಣೆ ಮಾಡಿದೆವು. ಕನ್ನಡ ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂದಿಗೂ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಕನ್ನಡ ಸಾಹಿತ್ಯ, ವಿಚಾರದಲ್ಲಿ ನಮ್ಮ ಮುಖ್ಯಮಂತ್ರಿಗಳು ಎಂದೆಂದಿಗೂ ಉದಾರತೆಯಿಂದ ನಡೆದುಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಇದಕ್ಕೆ ಇನ್ನಷ್ಟು ಹಿರಿಮೆ-ಗರಿಮೆ ಬಂದಿದೆ’

-ಶಿವರಾಜ್ ತಂಗಡಗಿ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News