×
Ad

ಹೊರಗಿನಿಂದ ಬಂದವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಆದ್ಯತೆ: ಡಿ.ಕೆ. ಸುರೇಶ್

"ಯತೀಂದ್ರ ಮಾತೇ ನಮಗೆ ವೇದವಾಕ್ಯ"

Update: 2026-02-11 19:44 IST

ಡಿ.ಕೆ. ಸುರೇಶ್ (Screengrab:X/@DKSureshINC)

ಬೆಂಗಳೂರು: ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್‍ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದರು.

ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಭೂಕಾಂತ್ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿರುವ ಕುರಿತು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬಂದಿರುವ ವಿರೋಧದ ಕುರಿತು ಬುಧವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಕಾಂಗ್ರೆಸ್ ಎಲ್ಲರನ್ನು ಗೌರವಿಸುತ್ತದೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಭಾವನೆ ಮುಖ್ಯಮಂತ್ರಿಗೆ ಇರುವುದರಿಂದ ಮಾಡಿರಬಹುದು. ಇದರಲ್ಲಿ ತಪ್ಪೇನಿಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

ದಿಲ್ಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ:

ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಆದಾಗ ಮಾತ್ರ ದಿಲ್ಲಿಗೆ ಹೋಗುತ್ತಿಲ್ಲ. ಕಳೆದ 40 ವರ್ಷಗಳಿಂದ ನಿರಂತರವಾಗಿ ಹೋಗುತ್ತಿದ್ದಾರೆ. ಈಗ ಅವರು ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ, ಸರಕಾರದ ಕೆಲಸಗಳು ಇರುತ್ತವೆ. ಇನ್ನು ದಿಲ್ಲಿಗೆ ಹೋದಾಗ, ರಾಜಕೀಯವಾಗಿ ಅಲ್ಲದಿದ್ದರೂ ಕುಶಲೋಪರಿ ಚರ್ಚೆಗೆ ಭೇಟಿ ಮಾಡುತ್ತಾರೆ. ಸಂಸತ್ ಅಧಿವೇಶನ ನಡೆಯುತ್ತಿರುವಾಗ ಇಲಾಖೆಗಳಿಗೆ ಸಂಬಂಧಿಸಿದ ಚರ್ಚೆ ಮಾಡಲು ಮಂತ್ರಿಗಳನ್ನು ಭೇಟಿ ಮಾಡಲಾಗುವುದು. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರಿನ ವಿಚಾರವಾಗಿ ಚರ್ಚೆ ಮಾಡುತ್ತಾರೆ ಎಂದು ಅವರು ಹೇಳಿದರು.

ಯತೀಂದ್ರ ಮಾತೇ ನಮಗೆ ವೇದವಾಕ್ಯ:

ಐದು ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಶಾಸಕ ಯತೀಂದ್ರ ಸಿದ್ದಾಮಯ್ಯ ನೀಡಿರುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್, ಈ ವಿಚಾರವಾಗಿ ಉಪ ಮುಖ್ಯಮಂತ್ರಿ ಈಗಾಗಲೇ ಹೇಳಿದ್ದಾರೆ. ಯತೀಂದ್ರ ಅವರಷ್ಟು ನಮಗೆ ತಿಳುವಳಿಕೆ ಇಲ್ಲ. ಅವರಷ್ಟು ದೊಡ್ಡವರು ನಾವಲ್ಲ. ಅವರು ಏನು ಹೇಳುತ್ತಾರೋ ಅದೇ ನಮಗೆ ವೇದವಾಕ್ಯ ಎಂದು ತಿಳಿಸಿದರು.

ಪಕ್ಷದಿಂದ ನಮಗೆ ಸಿಗುವ ನೋಟೀಸ್ ಯತೀಂದ್ರ ಅವರಿಗೆ ಏಕೆ ಕೊಡುತ್ತಿಲ್ಲ ಎಂದು ಶಾಸಕ ಇಕ್ಬಾಲ್ ಹುಸೇನ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸುರೇಶ್, ಇಕ್ಬಾಲ್ ಹುಸೇನ್ ಹೇಳಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು. ಅವರೇ ಹೈಕಮಾಂಡ್ ಆಗಿರುವುದರಿಂದ ಏನೂ ಸಮಸ್ಯೆ ಇಲ್ಲ ಎಂದರು.

ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ:

ಕೆಎಂಎಫ್ ಚುನಾವಣೆಯಲ್ಲಿ ನಿಮ್ಮ ಜೊತೆಗೆ ಇನ್ನಿಬ್ಬರು ಶಾಸಕರು ಸ್ಪರ್ಧಿಸಲು ಆಕಾಂಕ್ಷಿಗಳಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಹಾಗೂ ಸರಕಾರದ ತೀರ್ಮಾನದಂತೆ ಆಗುತ್ತದೆ. ಇದರಲ್ಲಿ ಲಾಭಿ ಮಾಡಿ ಗಿಟ್ಟಿಸಿಕೊಳ್ಳುವಂತಹದ್ದು ಏನೂ ಇಲ್ಲ. ಇದು ರಾಜ್ಯದ ರೈತರ ಜವಾಬ್ದಾರಿಯುತ ಸಂಸ್ಥೆ. ರೈತರ ಹಿತ ಕಾಯುವುದು ಮುಖ್ಯ ಎಂದು ತಿಳಿಸಿದರು.

ಪಕ್ಷ ಹಾಗೂ ಸರಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ನಾನು ಯಾರಿಗೂ ಈ ಜವಾಬ್ದಾರಿ ಬೇಕು ಎಂದು ಕೇಳುವುದಿಲ್ಲ, ಅದರ ಅಗತ್ಯವಿಲ್ಲ. ಸಂಸದನಾಗಿ ನಾನು ಕೆಲಸ ಮಾಡಿದ್ದೇನೆ, ನನಗೆ ನನ್ನದೇ ಆದ ಜವಾಬ್ದಾರಿ ಇತಿ ಮಿತಿಗಳಿವೆ. ನಾನು ಯಾವುದನ್ನು ಆಸೆಪಟ್ಟು ಕೇಳುವುದಿಲ್ಲ, ಅದರ ಹಿಂದೆ ಹೋಗುವವನೂ ಅಲ್ಲ ಎಂದು ಸುರೇಶ್ ಹೇಳಿದರು.

ದಿಲ್ಲಿಯಲ್ಲಿ ಡೈರಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ನಡೆಯುತ್ತಿದ್ದು, ಅಧಿಕಾರಿಗಳು ಆಡಳಿತ ಮಂಡಳಿ ಸೇರಿ 20 ಜನರನ್ನು ಕರೆದುಕೊಂಡು ಹೋಗುತ್ತಿದ್ದೇನೆ. ರಾಜ್ಯದ ನಂದಿನಿಯನ್ನು ಭವಿಷ್ಯದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಹೋಗುತ್ತಿದ್ದೇವೆ ಎಂದು ಅವರು ತಿಳಿಸಿದರು.

ಶಾಸಕರ ಪ್ರವಾಸಕ್ಕೂ ಶಿವಕುಮಾರ್ ಅವರಿಗೂ ಸಂಬಂಧವಿಲ್ಲ: ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್ ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಶಾಸಕರ ಪ್ರವಾಸ ವೈಯಕ್ತಿಕವಾಗಿಯೂ ಇರಬಹುದು, ಬೇರೆಯವರ ಪ್ರಯೋಜಕತ್ವವೂ ಇರಬಹುದು.

ಜಿಬಿಎ ಚುನಾವಣೆ ಮತ್ತೆ ಮುಂದಕ್ಕೆ ಹೋಗುವ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಮ್ಮ ಕ್ಷೇತ್ರಗಳಲ್ಲಿ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಫಲಿತಾಂಶ ಒಳ್ಳೆಯದಾಗುತ್ತದೆಯೋ, ಕೆಟ್ಟದಾಗುತ್ತದೋ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡಲೇ ಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News