×
Ad

ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂಗೆ ಪದ್ಮವಿಭೂಷಣ ಸೇರಿದಂತೆ ಕರ್ನಾಟಕದ 9 ಮಂದಿಗೆ ಪದ್ಮ ಗೌರವ

Update: 2025-01-25 19:48 IST

PC: PTI

ಹೊಸದಿಲ್ಲಿ: ಗಣರಾಜ್ಯ ದಿನದ ಮುನ್ನಾದಿನವಾದ ಶನಿವಾರ ಕೇಂದ್ರ ಸರಕಾರವು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ರಾಜ್ಯದ 9 ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವಯೋಲಿನ್ ವಾದಕ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂಗೆ ಅವರಿಗೆ ಕಲಾ ಕ್ಷೇತ್ರದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ನಟ ಅನಂತ್ ನಾಗ್‌ಗೆ ಕಲಾ ಕ್ಷೇತ್ರದಿಂದ, ಪ್ರಸಾರ ಭಾರತಿಯ ನಿಕಟಪೂರ್ವ ಅಧ್ಯಕ್ಷ ಎ.ಸೂರ್ಯಪ್ರಕಾಶ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಪತ್ರಿಕೋದ್ಯಮ ಕ್ಷೇತ್ರದಿಂದ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ.

ಕಲಾ ಕ್ಷೇತ್ರದಿಂದ ಕೊಪ್ಪಳ ಮೂಲದ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿ‍ಳ್ಳೇಕ್ಯಾತರ, ಹಾಸನ ರಘು, ರಿಕಿ ಗ್ಯಾನ್ ಕೇಜ್, ಬಾಗಲಕೋಟೆ ಮೂಲದ ವೆಂಕಪ್ಪ ಅಂಬಾಜಿ ಸುಗಟೇಕರ್, ವೈದ್ಯಕೀಯ ಕ್ಷೇತ್ರದಿಂದ ಕಲಬುರಗಿ ಮೂಲದ ವಿಜಯಲಕ್ಷ್ಮಿ ದೇಶಮಾನೆ, ಉದ್ಯಮ ಕ್ಷೇತ್ರದಿಂದ ಪ್ರಶಾಂತ್ ಪ್ರಕಾಶ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ವೆಂಕಪ್ಪ ಅಂಬಾಜಿ ಸುಗಟೇಕರ್ : 

ಬಾಗಲಕೋಟೆ ನಿವಾಸಿಯಾಗಿರುವ ವೆಂಕಪ್ಪ ಸಂಬಾಜಿ ಸುಗಟೇಕರ್ ಶಾಲಾ ಶಿಕ್ಷಣವನ್ನೂ ಪಡೆಯದಿದ್ದರೂ ಸಾವಿರಕ್ಕೂ ಅಧಿಕ ಗೊಂದಲಿ ಜಾನಪದ ಹಾಡುಗಳನ್ನು ಹಾಡುವ ಮೂಲಕ ‘ಗೊಂದಲಿ ಸಂಗೀತ ಭೀಷ್ಮ’ ಎಂದು ಕರೆಯಲ್ಪಡುತ್ತಾರೆ. 81 ವರ್ಷದ ವೆಂಕಪ್ಪ ಅಂಬಾಜಿ, 60 ವರ್ಷಗಳಿಂದ ಗೊಂದಲಿ ಹಾಡುಗಳನ್ನು ಹಾಡುತ್ತಿದ್ದಾರೆ.

150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಲಿ ಹಾಡುಗಳನ್ನು ಅವರು ಹಾಡಿದ್ದಾರೆ. ಅಲ್ಲದೇ, ಸಾವಿರಾರು ಮಂದಿಗೆ ಗೊಂದಲಿ ಹಾಡಲು ಉಚಿತವಾಗಿ ಕಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ 110ನೇ ಮನ್ ಕೀ ಬಾತ್ ರೇಡಿಯೊ ಸರಣಿಯಲ್ಲೂ ವೆಂಕಪ್ಪ ಅಂಬಾಜಿ ಸುಗತೇಕರ್ ಅವರನ್ನು ಗುಣಗಾನ ಮಾಡಿದ್ದರು.

ಗೊಂದಲಿ ಪದ ಸೇವೆಗಾಗಿ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯವು 2022ರಲ್ಲಿ ವೆಂಕಪ್ಪ ಅಂಬಾಜಿ ಸುಗಟೇಕರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ರಾಜ್ಯ ಸರಕಾರದ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅಲ್ಲದೇ. ಆಕಾಶವಾಣಿ ಹಾಗೂ ರೇಡಿಯೊಗಳಲ್ಲೂ ಅವರ ಅನೇಕ ಕಾರ್ಯಕ್ರಮಗಳು ಪ್ರಸಾರವಾಗಿವೆ.

ಚಿತ್ರನಟ ಅನಂತ್ ನಾಗ್ :

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಶಿರಾಲಿ ಮೂಲದ ಚಿತ್ರನಟ ಅನಂತನಾಗ್ ಬಹುಮುಖ ಪ್ರತಿಭೆ. ರಂಗಭೂಮಿ, ಚಲನಚಿತ್ರ, ಕಿರುತೆರೆ, ರಾಜಕಾರಣ, ಸಾಹಿತ್ಯ ಸೇರಿದಂತೆ ಬಹುಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಅಪರೂಪದ ವ್ಯಕ್ತಿ.

1948ರ ಸೆಪ್ಟಂಬರ್ 4ರಂದು ಜನಿಸಿದ ಅನಂತ್‌ನಾಗ್ ನಾಗರಕಟ್ಟೆ ಮೂಲತಃ ರಂಗನಟ. ಕನ್ನಡ, ಕೊಂಕಣಿ ಮತ್ತು ಮರಾಠಿ ರಂಗಭೂಮಿಯಲ್ಲಿ ಕಲಾ ಸೇವೆಗೈದವರು. ಪಿ.ವಿ.ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದ ಮೂಲಕ 1973ರಲ್ಲಿ ಚಿತ್ರರಂಗ ಪ್ರವೇಶಿಸಿದ ಅವರು, ಹೊಸ ಅಲೆಯ ಚಿತ್ರಗಳ ನೆಚ್ಚಿನ ನಟನಾಗಿ ರೂಪುಗೊಂಡ ಅನಂತ್‌ನಾಗ್ ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ನ ಭೈರವಿ ವೆಂಕಟಸುಬ್ಬಯ್ಯ ಪಾತ್ರ ಬಲು ಜನಪ್ರಿಯ.

1977ರಲ್ಲಿ ದೊರೆಭಗವಾನ್ ಅವರ ‘ಬಯಲುದಾರಿ’ ಚಿತ್ರದ ಮೂಲಕ ಮುನ್ನೆಲೆಗೆ ಬಂದವರು. ಕಾದಂಬರಿ ಚಿತ್ರಗಳು, ಪ್ರಯೋಗಾತ್ಮಕ ಚಿತ್ರಗಳ ಮೂಲಕ ಪ್ರವರ್ಧಮಾನಕ್ಕೆ ಬಂದವರು ಅನಂತ್‌ನಾಗ್. ಸದಭಿರುಚಿ ಚಿತ್ರಗಳ ಸರದಾರರೆಂಬ ಹೆಗ್ಗಳಿಕೆ ಪಾತ್ರವಾಗಿರುವ ಅವರು, ಬೆಳದಿಂಗಳ ಬಾಲೆ, ಮತದಾನ, ಗಾಳಿಪಟ, ಮುಂಗಾರುಮಳೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ವರೆಗೂ ಅನಂತ್ ಅಭಿನಯಕ್ಕೆ ಅವರೇ ಸಾಟಿ.

ನಾಲ್ಕು ಬಾರಿ ರಾಜ್ಯ ಪ್ರಶಸ್ತಿ, 6 ಬಾರಿ ಫಿಲಂ ಫೇರ್ ಪ್ರಶಸ್ತಿ, ವಿಷ್ಣುವರ್ಧನ ಪ್ರಶಸ್ತಿ, ನನ್ನ ತಮ್ಮ ಶಂಕರ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿರುವ ಅನಂತ್‌ನಾಗ್ ಅವರ ಚಿತ್ರರಂಗದ ಪಯಣಕ್ಕೀಗ 52ರ ಸಂಭ್ರಮ. ಇದೀಗ ಪದ್ಮಭೂಷಣ ಪ್ರಶಸ್ತಿಯ ಸಂಭ್ರಮ.

ಸೂರ್ಯ ಪ್ರಕಾಶ್ :

ಹಾಸನ ಜಿಲ್ಲೆಯ ಅರಕಲಗೂಡು ಮೂಲದ ಸೂರ್ಯ ಪ್ರಕಾಶ್ ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ. ಸೂರ್ಯಪ್ರಕಾಶ್ ಹೆಸರಾಂತ ಪತ್ರಕರ್ತರು. ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಮೈಸೂರು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ತುಮಕೂರು ವಿವಿಯಲ್ಲಿ ಡಿ.ಲಿಟ್ ಪಡೆದಿದ್ದಾರೆ. ಝೀ ನ್ಯೂಸ್, ದಿ ಪಯೋನಿರ್, ಏಷ್ಯಾ ಟೈಮ್ಸ್, ಇಂಡಿಯನ್ ಎಕ್ಸ್‌ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಇವರು, ರಾಜಕೀಯ ವಿಶ್ಲೇಷಣೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪಾರ ಜ್ಞಾನವುಳ್ಳವರು. ಇದೀಗ ಅವರಿಗೆ ಪದ್ಮಭೂಷಣ ಸಂದಿದೆ.

ಪ್ರಶಾಂತ್ ಪ್ರಕಾಶ್

ಕನ್ನಡಿಗರಾದ ಪ್ರಶಾಂತ್ ಪ್ರಕಾಶ್, ಡಿಜಿಟಲ್ ಉದ್ಯಮದಲ್ಲಿ ದೊಡ್ಡ ಹೆಸರು. ಡಿಜಿಟಲ್ ಉದ್ಯಮದಲ್ಲಿ ಮೂರು ದಶಕಗಳ ಅನುಭವವುಳ್ಳವರು. ಬೆಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನದಲ್ಲಿ ಇಂಜಿನಿಯರಿಂಗ್ ಪದವಿ, ಅಮೆರಿಕದ ಡೆಲವೇರ್ ವಿಶ್ವ ವಿದ್ಯಾನಿಲಯದಲ್ಲಿ ಸ್ನಾತಕ ಪದವಿ ಪಡೆದು 1995ರಲ್ಲಿ ಭಾರತದ ಮೊಟ್ಟ ಮೊದಲ ಅನಿಮೇಷನ್ ಕಂಪೆನಿಗಳನ್ನು ಒಂದೆನಿಸಿರುವ ವಿಷುವಲ್ ರಿಯಾಲಿಟಿ ಸಂಸ್ಥೆಯನ್ನು ಸ್ಥಾಪಿಸಿದರು.

ಡಾ.ವಿಜಯಲಕ್ಷ್ಮೀ ದೇಶಮಾನೆ :

ಕಲಬುರಗಿ ಮೂಲದ ಹಿರಿಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಕಳೆದ 4 ದಶಕಗಳಿಗೂ ಹೆಚ್ಚು ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

ಖ್ಯಾತ ಕ್ಯಾನ್ಸರ್ ತಜ್ಞೆ ಎಂದು ಹೆಸರಾಗಿರುವ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ಮೂಲತಃ ಕಲಬುರಗಿಯವರು. ತಂದೆ ಬಾಬುರಾವ್ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೆ, ತಾಯಿ-ರತ್ನಮ್ಮ ತರಕಾರಿ ಮಾರಾಟಗಾರರಾಗಿದ್ದರು. ಕಡುಬಡತನ ಮಧ್ಯೆ ಓದು ಮುಂದುವರಿಸಿದ ಅವರ ವಿದ್ಯಾಭ್ಯಾಸಕ್ಕೆ ಅವರ ತಾಯಿ ತಾಳಿ ಮಾರಿ ಶುಲ್ಕ ಕಟ್ಟಿದ್ದರು. ಈ ಮೂಲಕ ವಿಜಯಲಕ್ಷ್ಮೀ ಅವರು 1980ರಲ್ಲಿ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವೈದ್ಯಕೀಯ ಪದವಿ ಪಡೆದರು. ಬಳಿಕ 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ಸೇರ್ಪಡೆಯಾದರು. 1989ರಲ್ಲಿ ಮುಂಬೈಯ ಟಾಟಾ ಸ್ಮಾರಕ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ತರಬೇತಿ ನಂತರ ಅವರು 1993ರಲ್ಲಿ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಎಫ್‌ಎಐಎಸ್ ಫೆಲೋಶಿಪ್‌ಗೆ ಪಾತ್ರರಾದರು. ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯ ಶಸಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ, ಮುಖ್ಯಸ್ಥೆ, ಸಂಸ್ಥೆಯ ನಿರ್ದೇಶಕಿಯಾಗಿಯೂ ಮಹತ್ವದ ಸೇವೆ ಸಲ್ಲಿಸಿದ್ದಾರೆ.

ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ಉಪಾಧ್ಯಕ್ಷೆಯಾಗಿದ್ದರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಅಂತರ್‌ರಾಷ್ಟ್ರೀಯ ವಲಯ ರಾಷ್ಟ್ರೀಯರತ್ನ, ಕೆಂಪೇಗೌಡ ಪ್ರಶಸ್ತಿ, ಮೆಡಿಕಲ್ ಎಕ್ಸಲೆನ್ಸ್ ಪ್ರಶಸ್ತಿ, ಶಿರೋಮಣಿ ಪ್ರಶಸ್ತಿ, 1999ರ ವರ್ಷದ ಮಹಿಳಾ ಪ್ರಶಸ್ತಿ ಸೇರಿದಂತೆ ದೇಶ ವಿದೇಶಗಳಿಂದಲೂ ಇವರಿಗೆ ಪ್ರಶಸ್ತಿಗಳು ಒಲಿದುಬಂದಿವೆ.

ಹಾಸನ ರಘು :

ಮೂಲತ ಹಾಸನ ಜಿಲ್ಲೆಯ ಹಾಸನ ರಘು ಅವರು ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಸಾಹಸ ಕಲಾವಿದ. ಸಾಹಸ ಕಲಾವಿದರ ಸಂಘದ ಅಧ್ಯಕ್ಷರಾಗಿ ವೃತ್ತಿನಿರತರ ಸಂಕಷ್ಟಗಳಿಗೆ ಸ್ಪಂದಿಸಿದವರು.

ನೂರಾರು ಚಲನಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿ ಹೆಸರಾದವರು. ಸಾಹಸಿಂಹ ವಿಷ್ಣುವರ್ಧನ್‌ರ ಹಲವು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ ಕೀರ್ತಿ ಅವರದ್ದು. ಸಾವಿರಾರು ಮಕ್ಕಳಿಗೆ ಸಾಹಸ ಕಲೆಯನ್ನು ಕಲಿಸಿದ ಗುರು. ರಾಮನಗರದ ಶ್ರೀರಾಮದೇವರ ಬೆಟ್ಟದ ರಸ್ತೆ ಹತ್ತಿರ ಸಾಹಸ ಕಲಾ ಶಿಕ್ಷಣ ಕೇಂದ್ರವನ್ನು ಸ್ಥಾಪಸಿರುವ ಸಾಹಸಿ. ಹಾವೇರಿ ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವ ಹಾಸನ ರಘು ಅವರಿಗೆ ಇದೀಗ ಪದ್ಮಶ್ರೀಯ ಗೌರವ ಸಂದಿದೆ.

ರಿಕ್ಕಿ ಕೇಜ್ :

ಅಮೆರಿಕದ ಉತ್ತರ ಕರೊಲಿನಾದಲ್ಲಿ ಜನಿಸಿರುವ ರಿಕ್ಕಿ ಕೇಜ್ ಮೂಲತಃ ಭಾರತದವರು. ಬೆಂಗಳೂರಿನಲ್ಲಿ ನೆಲೆಸಿರುವ ರಿಕ್ಕಿ ಕೇಜ್ ಅವರಿಗೆ ಸಂಗೀತವೇ ಉಸಿರು. 3 ಬಾರಿ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿಗೆ ಭಾಜನರಾಗಿರುವ ರಿಕಿ ಕೇಜ್ ಹೆಸರಾಂತ ಗಾಯಕ, ಜನಪ್ರಿಯ ಸಂಗೀತ ನಿರ್ದೇಶಕ.

‘ವಿಂಡ್ಸ್ ಆಫ್ ಸಂಸಾರ’, ಡಿವೈನ್ ಟೈಡ್ಸ್ ಮತ್ತು ಮತ್ತು ಬ್ರೇಕ್ ಆಫ್ ಡಾನ್ ಧ್ವನಿಸುರಳಿಗಳಿಗೆ ಪ್ರತಿಷ್ಠಿತ ಗ್ರಾಮಿ ಪ್ರಶಸ್ತಿ ಪಡೆದಿರುವ ರಿಕ್ಕಿ ಕೇಜ್ ಕನ್ನಡದ ಐದು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 3 ಸಾವಿರಕ್ಕೂ ಅಧಿಕ ಜಾಹೀರಾತುಗಳಿಗೆ ಸ್ವರ ಸಂಯೋಜನೆ, 2011ರ ವಿಶ್ವಕಪ್ ಕ್ರಿಕೆಟ್ ಉದ್ಘಾಟನಾ ಸಮಾರಂಭಕ್ಕೆ ಸಂಗೀತ ಸಂಯೋಜಿಸಿದ ಕೀರ್ತಿ ರಿಕ್ಕಿ ಅವರದ್ದು.

ಭೀಮವ್ವ ಶಿಳ್ಳೆಕ್ಯಾತರ :

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ಹಿರಿಯ ಜನಪದ ಕಲಾವಿದೆ ಭೀಮವ್ವ ದೊಡ್ಡಬಾಳವ್ವ ಶಿಳ್ಳೆಕ್ಯಾತರ ಈ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದರೆ. ದೇಶ-ವಿದೇಶಗಳಲ್ಲೂ ಜನಪದದ ಕಂಪು ಸೂಸಿ ನಾಡಿನ ಅತ್ಯಂತ ಅಪರೂಪದ ಕಲಾಕುಸುಮ ಭೀಮವ್ವ.

1925ರ ಜನವರಿ 24ರಂದು ಜನಿಸಿದ ಭೀಮವ್ವ, ಮನೆಯಲ್ಲಿ ಕಿತ್ತುತಿನ್ನುವ ಬಡತನ. ಅನ್ನವೂ ಇಲ್ಲ, ಅಕ್ಷರ ಕಲಿಕೆಗೂ ತತ್ವಾರ. ಆ ಸ್ಥಿತಿಯಲ್ಲಿ ಕೈಹಿಡಿದದ್ದು ಕಲಾದೇವಿಯೇ. ಭೀಮವ್ವರದ್ದು ಕಲಾಮನೆತನ. ಶಿಳ್ಳೆಕ್ಯಾತರ ಕುಟುಂಬ ತೊಗಲುಬೊಂಬೆಯಾಟಕ್ಕೆ ಸದಾ ಹೆಸರುವಾಸಿ. ವಂಶಪಾರ್ಯದಿಂದ ಬಂದ ತೊಗಲುಬೊಂಬೆಯಾಟದತ್ತ ಬಾಲ್ಯದಲ್ಲೇ ಆಕರ್ಷಣೆಯಾದರು.

ಅಮೆರಿಕ, ಸ್ವಿಝರ್‌ಲ್ಯಾಂಡ್, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೇಬಿಯಾ, ಐರ್ಲೆಂಡ್, ಪ್ಯಾರಿಸ್, ದುಬೈ ಸೇರಿದಂತೆ ಹಲವು ವಿದೇಶಗಳಲ್ಲಿ ತೊಗಲುಬೊಂಬೆಯಾಟ ಪ್ರದರ್ಶಿಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಭೀಮವ್ವ ವಿದೇಶಿಯರಿಂದ ಅಪಾರ ಮೆಚ್ಚುಗೆ ಪಡೆದ ಧೀಮಂತ ಕಲಾವಿದೆ. ಅನ್ನಕ್ಕಾಗಿ ಕಲಿತ ಕಲೆ ಬದುಕು ಬೆಳಗಿದ ಪರಿಗೆ ಲೋಕಕ್ಕೆ ಅಚ್ಚರಿ, ಭೀಮವ್ವಗೆ ಸಾರ್ಥಕ ಭಾವ. ತನ್ನ ಐವರು ಮಕ್ಕಳಿಗೂ ತೊಗಲುಬೊಂಬೆಯಾಟ ಕಲೆಯನ್ನು ಕಲಿಸಿದ್ದಾರೆ.

ಇವರ ಸಾಧನೆಗೆ ಸಂದ ಪ್ರಶಸ್ತಿ-ಗೌರವಗಳು ಅಪಾರ. 1992ರಲ್ಲಿ ಟ್ರಹನ್ ಪ್ರಶಸ್ತಿ, ಅಖಿಲ ಭಾರತ 62ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪುರಸ್ಕಾರ, ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಪ್ರಶಸ್ತಿ, ಕರ್ನಾಟಕ ಜಾನಪದ-ಯಕ್ಷಗಾನ ಆಕಾಡಮಿಯ ಗೌರವ ಪ್ರಶಸ್ತಿ, ಚಿತ್ರದುರ್ಗದ ಶರಣ ಸಂಸ್ಕೃತಿ ಉತ್ಸವದಲ್ಲಿ ಪುರಸ್ಕಾರ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗೊಂಬೆ ಪರಂಪರೆ ಪ್ರಶಸ್ತಿ, ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು, ರಾಜ್ಯ ಸರಕಾರದ ಪ್ರತಿಷ್ಠಿತ ಜಾನಪದಶ್ರೀ ಪ್ರಶಸ್ತಿಯ ಗೌರವವೂ ಸಿಕ್ಕಿದೆ. ಇದೀಗ ಪದ್ಮಶ್ರೀ ಭೀಮವ್ವರ ಮುಕುಟಕ್ಕೆ ಮತ್ತೊಂದು ಕಿರೀಟವನ್ನೇ ತಂದುಕೊಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News