×
Ad

ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ʼರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿʼ : ಸಚಿವ ಶಿವರಾಜ ತಂಗಡಗಿ

Update: 2025-09-20 13:42 IST

ಪಂಡಿತ ವೆಂಕಟೇಶ್ ಕುಮಾರ್

ಬೆಂಗಳೂರು : ಪ್ರತಿವರ್ಷ ನಾಡಹಬ್ಬ ದಸರಾ ಸಂದರ್ಭದಲ್ಲಿ ಮೈಸೂರಿನ ಅರಮನೆಯ ಮುಂಭಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಪ್ರತಿಷ್ಠಿತ ‘ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಪ್ರಸಕ್ತ ಸಾಲಿನಲ್ಲಿ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ದೇಶ-ವಿದೇಶಗಳಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಖ್ಯಾತರಾಗಿರುವ ಹಿಂದುಸ್ತಾನಿ ಸಂಗೀತ ದಿಗ್ಗಜರಲ್ಲಿ ಒಬ್ಬರೆನಿಸಿದ ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಆಯ್ಕೆ ಅತ್ಯಂತ ಸಂತೋಷ ತಂದಿದೆ. ಸೆ.22ರಂದು ಮೈಸೂರಿನ ಅರಮನೆಯ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಡಾ.ವೈ.ಕೆ.ಮುದ್ದುಕೃಷ್ಣ ಅವರ ಆಯ್ಕೆ ಸಲಹಾ ಸಮಿತಿ ಪಂ.ವೆಂಕಟೇಶ್ ಕುಮಾರ್ ಅವರನ್ನು ಆಯ್ಕೆ ಮಾಡಿದೆ. ‘ಸಂಗೀತ ವಿದ್ವಾನ್ ಪ್ರಶಸ್ತಿ’ಯು 5 ಲಕ್ಷ ರೂಪಾಯಿ ನಗದು, ಸ್ಮರಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಪರಿಚಯ: ಎಂ.ವೆಂಕಟೇಶ್ ಕುಮಾರ್ ಬಳ್ಳಾರಿ ಜಿಲ್ಲೆಯ ಲಕ್ಷ್ಮೀಪುರ ಗ್ರಾಮ ಮೂಲದವರು. ಇವರ ತಂದೆ ಪ್ರಸಿದ್ಧ ಜಾನಪದ ಕಲಾವಿದರು. ಅವರಿಂದ ಪ್ರಭಾವಿತರಾದ ವೆಂಕಟೇಶ್ ಕುಮಾರ್ ಹಳ್ಳಿಯ ಪರಂಪರಾಗತ ಜಾನಪದ ಸಂಪ್ರದಾಯದಲ್ಲಿ ಬೆಳೆದರು. ಸಂಗೀತಕ್ಕೆ ಇವರಲ್ಲಿರುವ ಸಮರ್ಪಣ ಭಾವವನ್ನು ಗುರುತಿಸಿದ ಪಂಡಿತ ಪುಟ್ಟರಾಜ ಗವಾಯಿಗಳು. ಗದಗಿನ ಗುರುಕುಲ ಆಶ್ರಮದಲ್ಲಿ ತಮ್ಮ ಗಾನವಿದ್ಯೆಯನ್ನು ಇವರಿಗೆ ಧಾರೆಯೆರೆದರು. ಹೀಗೆ ಇವರು ಕಿರಾಣಾ ಮತ್ತು ಗ್ವಾಲಿಯರ್ ಎರಡೂ ಘರಾಣೆಗಳ ಸಂಗೀತವನ್ನು ಅದರ ಎಲ್ಲ ಸೂಕ್ಷ್ಮತೆಗಳೊಂದಿಗೆ ಮೈಗೂಡಿಸಿಕೊಂಡರು. ಮುಂದೆ ಇವರು ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂಬೈನ ಗಂಧರ್ವ ಮಹಾವಿದ್ಯಾಲಯದಿಂದ ಪಡೆದರು.

ಇವರು ದೇಶ-ವಿದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಟ್ಟಿರುತ್ತಾರೆ. ಇವರ ಶಾಸ್ತ್ರೀಯ ಗಾಯನ, ವಚನ ಗಾಯನ ಹಾಗೂ ದಾಸರ ಪದಗಳ ಧ್ವನಿಮುದ್ರಿಕೆಗಳು ಕರ್ನಾಟಕ ಹಾಗೂ ಭಾರತದಾದ್ಯಂತ ಜನಪ್ರಿಯವಾಗಿದೆ.

ಎಂ.ವೆಂಕಟೇಶ್ ಕುಮಾರ್‌ಗೆ  ‘ಸ್ವರಶ್ರೀ, ಸಂಗೀತ ಸುಧಾಕರ, ಸಂಗೀತ ರತ್ನ’ ಸೇರಿದಂತೆ ಹಲವು ಬಿರುದುಗಳು ಸಂದಿವೆ. ಕೇಂದ್ರ ಸಂಗೀತ ನಾಟಕ ಅಕ್ಯಾಡೆಮಿ ಪುರಸ್ಕಾರ(2011), ರಾಜ್ಯೋತ್ಸವ ಪುರಸ್ಕಾರ(1999), ಸಂಗೀತ ನೃತ್ಯ ಅಕಾಡೆಮಿ ಪುರಸ್ಕಾರ(2007), ಉಸ್ತಾದ ನಿಯಾಜ್ ಅಹಮದ್‌ ಖಾನ್ ಸ್ಮಾರಕ ಪುರಸ್ಕಾರ(2011), ಶರಣ ಸಾಹಿತ್ಯ ಪರಿಷತ್ತಿನ ರಮಣಶ್ರೀ ಪುರಸ್ಕಾರ(2007), ವಚನ ಸಾಹಿತ್ಯ ಶ್ರೀ ಪುರಸ್ಕಾರ(2009), ಕರ್ನಾಟಕ ವಿವಿ ಗೌರವ ಡಾಕ್ಟರೇಟ್ ಪದವಿ(2013) ಹಾಗೂ ‘ಪದ್ಮಶ್ರೀ' ರಾಷ್ಟ್ರೀಯ ಪುರಸ್ಕಾರ(2016) ಸೇರಿ ಹಲವು ಪ್ರಶಸ್ತಿ, ಗೌರವಗಳಿಗೆ ಭಾಜರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News