×
Ad

ಬಿಜೆಪಿ ಬಲಿಷ್ಠಗೊಳ್ಳಲು ಮೊದಲು ಒಳಾಂಗಣ ಶುದ್ಧಗೊಳಿಸಿ: ಡಿ.ವಿ. ಸದಾನಂದ ಗೌಡ

Update: 2025-02-10 18:35 IST

ಡಿ.ವಿ. ಸದಾನಂದ ಗೌಡ

ಬೆಂಗಳೂರು: ‘ಕರ್ನಾಟಕದ ಜನತೆ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ. ಆದರೆ, ಅವರ ವಿಶ್ವಾಸವನ್ನು ಸಂಪಾದಿಸಲು ಬಿಜೆಪಿಯ ಒಳಾಂಗಣವನ್ನು ಶುದ್ಧಗೊಳಿಸಿ, ಬಲಿಷ್ಠಗೊಳಿಸಬೇಕಾಗಿದೆ’ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಪಕ್ಷದಲ್ಲಿನ ಆಂತರಿಕ ಭಿನ್ನಮತ ನಿವಾರಿಸಬೇಕೆಂದು ಸಲಹೆ ನೀಡಿದ್ದಾರೆ.

ಸೋಮವಾರ ಪ್ರಕಟಣೆ ನೀಡಿರುವ ಅವರು, ದಿಲ್ಲಿ ಬಿಜೆಪಿಯ ಗೆಲುವು ನಮಗೆ ಪಾಠವಾಗಬೇಕು ಹಾಗೂ ಒಳಜಗಳ ಮುಗಿದು, ಕಾರ್ಯಪದ್ಧತಿಯಲ್ಲಿ ಸ್ಪಷ್ಟತೆ ಮತ್ತು ಶಿಸ್ತು ಇರಬೇಕು. ದಿಲ್ಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದು ಪಕ್ಷದ ಶ್ರಮ, ಸಂಘಟನೆ ಮತ್ತು ಜನಪರ ರಾಜಕೀಯದ ಫಲವಾಗಿದೆ. ಪ್ರಧಾನಿ ಮೋದಿ ದೃಢನಿಶ್ಚಯ, ಅಭಿವೃದ್ಧಿ ಪರ ಆಜಂಡಾ, ಮತ್ತು ಕೇಂದ್ರದ ಕಾರ್ಯಪದ್ಧತಿ ಜನತೆಯ ವಿಶ್ವಾಸವನ್ನು ಮತ್ತೆ ಗಳಿಸಿತು ಎಂದು ವಿಶ್ಲೇಷಿಸಿದ್ದಾರೆ.

ಪಕ್ಷದ ಬೂತ್‍ಮಟ್ಟದ ಬಲವಾದ ತಂತ್ರ, ಸುಸಂಘಟಿತ ಪ್ರಚಾರ ಯಂತ್ರ, ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ನಿರ್ಧಾರಾತ್ಮಕವಾಗಿ ಪರಿಹರಿಸುವ ನೇತೃತ್ವದ ಫಲವಾಗಿ ದಿಲ್ಲಿಯಲ್ಲಿ ಈ ಜಯ ಸಾಧ್ಯವಾಯಿತು. ಈ ಗೆಲುವು ಜನತೆಯ ಆಶೀರ್ವಾದ ಹಾಗೂ ನಾವೇ ಅನುಸರಿಸಬೇಕಾದ ಮಾರ್ಗದರ್ಶನವನ್ನು ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯ ಬಿಜೆಪಿ ಎದುರಿಸುತ್ತಿರುವ ಸವಾಲುಗಳು: ಕರ್ನಾಟಕದಲ್ಲಿ ಬಿಜೆಪಿ ಇನ್ನೂ ಆಂತರಿಕ ಕಲಹ ಮತ್ತು ಸಂಘಟನಾ ದೌರ್ಬಲ್ಯದಿಂದ ಬಳಲುತ್ತಿದೆ. ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಾಭಿಪ್ರಾಯಗಳು ಮತ್ತು ಗುಂಪು ರಾಜಕಾರಣದಿಂದ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ. ದಿಲ್ಲಿಯಲ್ಲಿ ಪಕ್ಷ ಏಕತೆ ಮತ್ತು ಶಿಸ್ತಿನ ಕಾರ್ಯಪದ್ಧತಿಯನ್ನು ಅನುಸರಿಸಿದರೆ, ಕರ್ನಾಟಕದಲ್ಲಿ ಕೆಲವು ನಾಯಕರು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಒಡಕು ಮೂಡಿಸಿರುವುದು ಗಂಭೀರ ಸಮಸ್ಯೆಯಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಇದರಿಂದ ಕಾರ್ಯಕರ್ತರು ಮತ್ತು ಮತದಾರರಲ್ಲಿ ಒಂದು ರೀತಿಯ ಅಸ್ಥಿರತೆ ಉಂಟಾಗಿದೆ. ಈ ಸನ್ನಿವೇಶವನ್ನು ಸರಿಪಡಿಸದೇ ಹೋದರೆ, ಮುಂಬರುವ ಚುನಾವಣೆಯಲ್ಲಿ ಎದುರಿಸಬೇಕಾಗಬಹುದು. ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿರುವ ಅವರು, ಪಕ್ಷದ ಯಶಸ್ಸು ಯಾವುದೇ ಒಬ್ಬ ವ್ಯಕ್ತಿಯ ಸಾಧನೆ ಅಲ್ಲ, ಇದು ಶ್ರದ್ಧೆ, ಶ್ರಮ, ಮತ್ತು ಸಮೂಹ ಶಕ್ತಿಯ ಪ್ರತೀಕ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಪಕ್ಷ ಮತ್ತಷ್ಟು ಬಲಿಷ್ಠಗೊಳ್ಳಬೇಕಾದರೆ, ಎಲ್ಲ ನಾಯಕರೂ ಒಗ್ಗೂಡಬೇಕು. ಸಂಘಟನೆಯ ಶಕ್ತಿಯನ್ನು ಪುನರ್ ನಿರ್ಮಿಸಬೇಕು ಮತ್ತು ಗಟ್ಟಿ ಕಾರ್ಯತಂತ್ರವನ್ನು ಅನುಸರಿಸಬೇಕು. ಪಕ್ಷದ ಹಿತಾಸಕ್ತಿಯನ್ನು ಮೊದಲಿಗಿಟ್ಟು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ, ಸಹಕಾರ ಮತ್ತು ಏಕತೆ ಯೋಗವನ್ನು ತರುವ ಹಂತ ಕಡ್ಡಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News