×
Ad

ಯುಪಿಎಸ್‌ಸಿ ಉನ್ನತ ಮಟ್ಟದ ಸಮಿತಿಯ ವರದಿ ಬಳಿಕ ಖಾಯಂ ಡಿಜಿ-ಐಜಿಪಿ ನೇಮಕ; ಹೈಕೋರ್ಟ್‌ಗೆ ಸರಕಾರದ ಮಾಹಿತಿ

Update: 2025-08-28 20:47 IST

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಉನ್ನತ ಮಟ್ಟದ ಸಮಿತಿಗೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರನ್ನು ನೇಮಕ ಮಾಡುವ ಸಂಬಂಧ ನಿರ್ದಿಷ್ಟ ಹೆಸರುಗಳನ್ನು ಶಿಫಾರಸು ಮಾಡಲಾಗಿದ್ದು, ಅಲ್ಲಿಂದ ವರದಿ ಬಂದ ಒಂದು ವಾರದಲ್ಲಿ ಖಾಯಂ ಐಜಿ-ಡಿಜಿಪಿಯನ್ನು ನೇಮಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ತಿಳಿಸಿದೆ.

ಸರಕಾರದ ಈ ಹೇಳಿಕೆ ಪರಿಗಣಿಸಿದ ಹೈಕೋರ್ಟ್, ಹಿರಿಯ ಐಪಿಎಸ್‌ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ರಾಜ್ಯ ಪ್ರಭಾರ ಪೊಲೀಸ್‌ ಮಹಾ ನಿರ್ದೇಶಕರಾಗಿ (ಡಿಜಿ-ಐಜಿಪಿ) ನೇಮಕ ಮಾಡಿ ಸರಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

ಸಲೀಂ ಅವರ ನೇಮಕಾತಿ ಪ್ರಶ್ನಿಸಿ ಬೆಂಗಳೂರಿನ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ರಾಜ್ಯ ಸರಕಾರದ ಪರವಾಗಿ ಹಾಜರಾದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಯುಪಿಎಸ್‌ಸಿಯ ಉನ್ನತ ಮಟ್ಟದ ಸಮಿತಿಗೆ ನಿರ್ದಿಷ್ಟ ಅಧಿಕಾರಿಗಳ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ಈ ಸಂಬಂಧ ಆಗಸ್ಟ್‌ 26ರಂದು ಯುಪಿಎಸ್‌ಸಿ ಸಮಿತಿಯು ಸಭೆಯನ್ನೂ ನಡೆಸಿದೆ. ಅಲ್ಲಿಂದ ವರದಿ ಬಂದ ಬಳಿಕ ಒಬ್ಬರನ್ನು ಪೊಲೀಸ್‌ ಮಹಾ ನಿರ್ದೇಶಕರನ್ನಾಗಿ ಒಂದು ವಾರದಲ್ಲಿ ನೇಮಕ ಮಾಡಿ ಆದೇಶಿಸಲಾಗುವುದು ಎಂದು ತಿಳಿಸಿದರು.

ಈ ಮಧ್ಯೆ, ಅರ್ಜಿದಾರರ ಪರ ವಕೀಲ ಎಸ್‌. ಉಮಾಪತಿ ಅವರು, ಸರಕಾರ ಅಂತಿಮ ಅಧಿಸೂಚನೆ ಹೊರಡಿಸುವವರೆಗೂ ಅರ್ಜಿಯನ್ನು ಬಾಕಿ ಉಳಿಸಬೇಕು ಎಂದು ಕೋರಿದರು. ಆದರೆ, ಅಡ್ವೊಕೇಟ್ ಜನರಲ್ ಅವರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ, ಪೊಲೀಸ್ ಮಹಾನಿರ್ದೇಶಕರ ನೇಮಕಾತಿ ವಿಚಾರದಲ್ಲಿ ರಾಜ್ಯ ಸರಕಾರ ಸುಪ್ರೀಂಕೋರ್ಟ್‌ ನಿರ್ದೇಶನಗಳನ್ನು ಪಾಲಿಸಿದೆ. ಆದ್ದರಿಂದ, ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ತಿಳಿಸಿ, ಪಿಐಎಲ್ ವಿಲೇವಾರಿ ಮಾಡಿತು.

ಅರ್ಜಿದಾರರ ಆಕ್ಷೇಪವೇನು?

ಖಾಯಂ ಡಿಜಿಪಿಯನ್ನು ನೇಮಕ ಮಾಡುವಾಗ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಕಾರಣಕ್ಕೂ ಕಾರ್ಯಕಾರಿ ಅಥವಾ ಪ್ರಭಾರ ಡಿಜಿಪಿಯನ್ನು ನೇಮಿಸಬಾರದು. ಪ್ರಭಾರ ಡಿಜಿಪಿ ಎಂಬ ಪರಿಕಲ್ಪನೆಯೇ ಇಲ್ಲ ಎಂದು ಸುಪ್ರೀಂಕೋರ್ಟ್‌ ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಡಾ. ಎಂ.ಎ. ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಿಸಿ 2025ರ ಮೇ 21ರಂದು ಸರಕಾರ  ಆದೇಶ ಹೊರಡಿಸಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿತ್ತು.

ಡಿಜಿಪಿ ನೇಮಕಾತಿಗೆ ಯುಪಿಎಸ್‍ಸಿ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಆ ಸಮಿತಿ ರಾಜ್ಯದಲ್ಲಿನ ಸೇವಾಹಿರಿತನ ಹೊಂದಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಸೇವೆ ಹಾಗೂ ನಡಾವಳಿ ಪರಿಶೀಲಿಸಿ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಬೇಕು. ಶಿಫಾರಸ್ಸುಗೊಂಡವರಲ್ಲಿ ಒಬ್ಬರನ್ನು ಮುಖ್ಯಮಂತ್ರಿಗಳು ಡಿಜಿಪಿಯಾಗಿ ನೇಮಿಸಬೇಕು. ಈ ಕುರಿತು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆ ಅಡಿ ಯುಪಿಎಸ್‌ಸಿಯಿಂದ ಮಾಹಿತಿ ಕೇಳಲಾಗಿತ್ತು. ಮೇ 21ರಿಂದ ಖಾಲಿಯಾಗಲಿರುವ ಡಿಜಿಪಿ ನೇಮಕಕ್ಕೆ ಉನ್ನತ ಸಮಿತಿ ರಚನೆ ಮಾಡಲು ಸರಕಾರ ಪ್ರಸ್ತಾವನೆ ಕಳುಹಿಸಿದೆ. ಆ ಪ್ರಕ್ರಿಯೆಯಲ್ಲಿ ಕೆಲ ಲೋಪ ಉಂಟಾಗಿದೆ. ಆ ಬಗ್ಗೆ ಸರಕಾರದಿಂದ ಸ್ಪಷ್ಟೀಕರಣಕ್ಕಾಗಿ ಕಾಯುತ್ತಿರುವುದಾಗಿ ಯುಪಿಎಸ್‌ಸಿ ಉತ್ತರಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಡಾ. ಎಂ.ಎ. ಸಲೀಂ ಅವರನ್ನು ಮೇ 21 ಹಾಗೂ ಅದಕ್ಕೂ ಮುಂಚಿತವಾಗಿ ಡಿಜಿಪಿ ಹುದ್ದೆಗೆ ನೇಮಕ ಮಾಡಲು ಉನ್ನತ ಮಟ್ಟದ ಸಮಿತಿಗೆ ಯಾವುದೇ ಶಿಫಾರಸು ಮಾಡಿರಲಿಲ್ಲ ಎಂದು ಆರ್‌ಟಿಐ ಉತ್ತರದಲ್ಲಿ ಯುಪಿಎಸ್‌ಸಿ ದೃಢಪಡಿಸುತ್ತದೆ. ಇದರಿಂದ, ಯುಪಿಎಸ್‌ಸಿ ಉನ್ನತ ಮಟ್ಟದ ಸಮಿತಿಯ ರಚನೆ ಮಾಡದೆಯೇ ಮತ್ತು ಅದರಿಂದ ಡಿಜಿಪಿ ಹುದ್ದೆಗಳನ್ನು ಶಿಫಾರಸು ಮಾಡುವ ಪ್ರಕ್ರಿಯೆ ನಡೆಸದೆ, ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಸಲೀಂ ಅವರನ್ನು ಪ್ರಭಾರ ಡಿಜಿಪಿ ಹುದ್ದೆಗೆ ನೇಮಿಸಲಾಗಿದೆ. ಇದು ಸುಪ್ರೀಂಕೋರ್ಟ್‌ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸಲೀಂ ಅವರನ್ನು ನೇಮಕಾತಿ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News