×
Ad

ಯುಪಿಸಿಎಲ್‌ನಿಂದ 47.2 ಕೋಟಿ ರೂ. ಪರಿಹಾರ ವಸೂಲಿಗೆ ನಿರ್ದೇಶನ ಕೋರಿದ್ದ ಪಿಐಎಲ್ ವಜಾ

Update: 2025-09-16 22:09 IST

ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಮಾಡಿರುವ ಹಾನಿಗೆ ಪರಿಹಾರವಾಗಿ ರಾಷ್ಟ್ರೀಯ ಹಸಿರು ನ್ಯಾಯಾಧಿಕಾರಣ (ಎನ್‌ಜಿಟಿ) ಚೆನ್ನೈ ಪ್ರಾದೇಶಿಕ ಪೀಠದ ಆದೇಶದಂತೆ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ (ಯುಪಿಸಿಎಲ್) ವತಿಯಿಂದ 47.2 ಕೋಟಿ ರೂ. ವಸೂಲಿ ಮಾಡಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಸಂಬಂಧ ವಕೀಲ ಎಸ್. ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರರು ಪ್ರಸ್ತಾಪಿಸಿರುವ ವಿಷಯಗಳು ಗಂಭೀರವಾಗಿರಬಹುದು. ಈ ವಿಚಾರ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಬಾಕಿಯಿದೆ. ಎನ್‌ಜಿಟಿ ಆದೇಶ ಪಾಲಿಸಲು ನಿರ್ದೇಶನ ನೀಡುವಂತೆ ಕೋರಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಡಿ ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ಅರ್ಜಿದಾರರ ಮನವಿ:

ಅದಾನಿ ಪವರ್ ಲಿಮಿಟೆಡ್ ಜತೆಗೆ ವಿಲೀನಗೊಂಡಿರುವ ಯುಪಿಸಿಎಲ್ ನಿಯಮ ಹಾಗೂ ಪರವಾನಗಿಗಳನ್ನು ಉಲ್ಲಂಘಿಸಿ ಉಡುಪಿ ಜಿಲ್ಲೆಯಲ್ಲಿ ಪರಿಸರ ಹಾಗೂ ಜನರ ಆರೋಗ್ಯದ ಮೇಲೆ ಹಾನಿಯುಂಟು ಮಾಡಿದೆ. ಅದಕ್ಕೆ ಪರಿಹಾರವಾಗಿ ಕಂಪನಿಯಿಂದ 47.2 ಕೋಟಿ ರೂ. ವಸೂಲಿ ಮಾಡಲು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಾಧೀಕಾರಣ ನಿರ್ದೇಶಿಸಿದೆ. ಆದರೆ, ಮೂರು ವರ್ಷ ಕಳೆದರೂ, ಆದೇಶ ಪಾಲನೆಯಾಗಿಲ್ಲ. ಗ್ರಾಮಸ್ಥರು ಸಂಕಷ್ಟದಲ್ಲಿದ್ದು, ಸರ್ಕಾರ ಹಾಗೂ ಇತರ ಪ್ರಾಧಿಕಾರಗಳು ಮೌನವಹಿಸಿವೆ. ಆದ್ದರಿಂದ, ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News