×
Ad

ಕೆಂಪೇಗೌಡರ ಮಾಗಡಿ ಕೋಟೆ ಸಂರಕ್ಷಣೆಗೆ ಕೋರಿ ಪಿಐಎಲ್; ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

Update: 2025-10-10 14:30 IST

Photo credit: PTI

ಬೆಂಗಳೂರು: ಮಾಗಡಿಯಲ್ಲಿರುವ ನಾಡಪ್ರಭು ಕೆಂಪೇಗೌಡರ ಕೋಟೆ ಸಂರಕ್ಷಣೆಗೆ ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಕೆಂಪೇಗೌಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಾಗಡಿಯ ಡಾ. ಎಚ್‌.ಎಂ. ಕೃಷ್ಣಮೂರ್ತಿ ಸಲ್ಲಿಸಿರುವ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಪುರಾತತ್ವ ಇಲಾಖೆಯ ಆಯುಕ್ತರು, ಪುರತಾತ್ವ ಇಲಾಖೆಯ ಉಪ ನಿರ್ದೇಶಕರು, ಮಾಗಡಿ ನಗರಾಭಿವೃದ್ಧಿ ಪ್ರಾಧಿಕಾರ, ಮಾಗಡಿ ಪುರಸಭೆ, ರಾಮನಗರ ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ಅರ್ಜಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್‌. ರವಿಶಂಕರ್‌ ವಾದ ಮಂಡಿಸಿ, 17ನೇ ಶತಮಾನದ ಇತಿಹಾಸ ಪ್ರಸಿದ್ಧ ಕೋಟೆಯನ್ನು ವಿಜಯನಗರ ಸಾಮ್ರಾಜ್ಯದ ಪ್ರಧಾನ ಕಮಾಂಡರ್‌ ಆಗಿದ್ದ ಕೆಂಪೇಗೌಡರು ನಿರ್ಮಿಸಿದ್ದರು. ಕೋಟೆಯ ಸಂರಕ್ಷಣೆ ಸಂಬಂಧ ಪುರಾತತ್ವ ಇಲಾಖೆಯ ಆಯುಕ್ತರು ವರದಿ ನೀಡಿದ್ದಾರೆ. ಕೋಟೆಯ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಡ್ರೋನ್‌ ಸಹಾಯದಿಂದ ತೆಗೆದ ಚಿತ್ರಗಳನ್ನು ಲಗತ್ತಿಸಲಾಗಿದೆ. ಕೋಟೆ ರಕ್ಷಣೆಗಾಗಿ 30 ಅಡಿ ಎತ್ತರದ ಗೋಡೆ ನಿರ್ಮಿಸಲಾಗಿದೆ. ಒಂದು ಭಾಗದ ಗೋಡೆ ಈಗಾಗಲೇ ನಾಶವಾಗಿದೆ. ಪಿಐಎಲ್ ಮೂಲಕ ಕೋಟೆ ಸಂರಕ್ಷಿಸುವಂತೆ ಕೇಳಬೇಕಿಲ್ಲ. ಸರ್ಕಾರವೇ ಸ್ವಯಂಪ್ರೇರಿತವಾಗಿ ಕೋಟೆಯ ರಕ್ಷಣೆಗೆ ಮುಂದಾಗಬೇಕಿತ್ತು ಎಂದರು.

ಮನವಿ ಏನು?

ನಾಡಪ್ರಭು ಕೆಂಪೇಗೌಡರ ಕೋಟೆ, ಕೋಟೆಯ ಕಂದಕ ಹಾಗೂ ಕೆಂಪೇಗೌಡರಿಂದ ಸ್ಥಾಪಿಸಲ್ಪಟ್ಟ ದೇವಾಲಯ, ಸ್ಮಾರಕ, ಶಿಲ್ಪಗಳನ್ನು ಸಂರಕ್ಷಿಸಬೇಕು. ಕೋಟೆಯ ಕಂದಕ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ಸಂಪೂರ್ಣವಾಗಿ ಮುಚ್ಚಿದ್ದು, ದಕ್ಷಿಣ ಭಾಗದಲ್ಲಿ ಕೆ-ಶಿಪ್‌ನವರು ಬೆಂಗಳೂರು-ಕುಣಿಗಲ್‌ ರಸ್ತೆ ಅಗಲೀಕರಣಕ್ಕಾಗಿ ಕೋಟೆಯ ಕಂದಕವನ್ನು ಅರ್ಧಭಾಗ ಮುಚ್ಚಿದ್ದಾರೆ. ಮೂರು ಕಡೆ ಕೋಟೆಯ ಕಂದಕ ಒತ್ತುವರಿಯಾಗಿದೆ. ಇದೇ ಜಾಗದಲ್ಲಿ ವ್ಯಾಪಾರ ಮಾಡಲು ಬೀದಿಬದಿ ವ್ಯಾಪಾರಿಗಳಿಗೆ ಪುರಸಭೆ ಅವಕಾಶ ಮಾಡಿಕೊಟ್ಟಿದೆ. ವ್ಯಾಪಾರಿಗಳು ಕೋಟೆಯ ಗೋಡೆಗಳಿಗೆ ಮೊಳೆ ಹೊಡೆದು ವಿರೂಪಗೊಳಿಸಿದ್ದಾರೆ. ಕಸ-ಕಡ್ಡಿಗಳನ್ನು ಎಸೆಯುವ ಮೂಲಕ ಕೋಟೆಯನ್ನು ತ್ಯಾಜ್ಯದ ಕೇಂದ್ರವನ್ನಾಗಿಸಲಾಗಿದೆ. ಕೋಟೆಯಲ್ಲಿ ಮಲ-ಮೂತ್ರ ವಿಸರ್ಜನೆ, ಮದ್ಯ ಸೇವನೆ ನಡೆಯುತ್ತಿದೆ. ಇದೆಲ್ಲವನ್ನೂ ನಿರ್ಬಂಧಿಸಿ, ಕೋಟೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News