×
Ad

ಮಾ.18ರ ಸೌಜನ್ಯ ಪರ ಹೋರಾಟದ ದಿಕ್ಸೂಚಿ ಸಭೆಗೆ ಮತ್ತೆ ಪೊಲೀಸ್ ತಡೆ; ಸಭೆ ಸಾಂಗವಾಗಿ ನಡೆಯಲಿದೆ ಎಂದ ಹೋರಾಟಗಾರರು

Update: 2025-03-18 00:30 IST

ಬೆಂಗಳೂರು : ಸೌಜನ್ಯ ಪರ ಹೋರಾಟದ ಕುರಿತು ನಗರದ ಶೇಷಾದ್ರಿಪುರದ ಎಐಟಿಯುಸಿ ಸಭಾಂಗಣದಲ್ಲಿ ಮಂಗಳವಾರ ಮಾ.18ರಂದು ನಿಗದಿಯಾಗಿದ್ದ ಸಮಾಲೋಚನಾ ಸಭೆಗೆ ಅವಕಾಶ ನಿರಾಕರಿಸಿ ಪೊಲೀಸರು ನೊಟೀಸ್ ನೀಡಿದ್ದಾರೆ.

ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಬೆಂಗಳೂರು ನಗರ ಪೊಲೀಸರು ನೊಟೀಸ್ ನಲ್ಲಿ ಉಲ್ಲೇಖಿಸಿದ್ದಾರೆ.

ಸಾರಿಗೆ ನೌಕರರ ಹಿತ ರಕ್ಷಣಾ ವೇದಿಕೆಯ ನವೀನ್ ಶೀನಿವಾಸ್, ಕರ್ನಾಟಕ ರಣಧೀರ ಪಡೆಯ ಭೈರಪ್ಪ ಹರೀಶ್ ಕುಮಾರ್, ವಕೀಲರಾದ ಮೈತ್ರಿಯವರ ನೇತೃತ್ವದಲ್ಲಿ 'ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ, ಊಳಿಗೆಮಾನ್ಯ ದರ್ಪದ ವಿರುದ್ಧ - ಸಾಹಿತಿ ಚಿಂತಕ ಹೋರಾಟದ ದಿಕ್ಕೂಚಿ ಸಭೆ ಹಮ್ಮಿಕೊಂಡಿದ್ದಾರೆ. ಪ್ರಸ್ತುತ ಸಭೆಯಲ್ಲಿ ಸಮಾಜದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆ ಹೆಚ್ಚಾಗುತ್ತಿರುವ ಕುರಿತು ಮತ್ತು ಸೌಜನ್ಯ ಪ್ರಕರಣದ ಕಾನೂನು ಹೋರಾಟದ ರೂಪುರೇಷೆ ಚರ್ಚೆಯಾಗಲಿದೆ. ಈ ಸಭೆಯಲ್ಲಿ 40-50 ಜನರು ಭಾಗವಹಿಸಲಿದ್ದಾರೆ ಎಂಬ ಮಾಹಿತಿಯಿದೆ. ಕರ್ನಾಟಕ ಹೈಕೋರ್ಟ್ ಆದೇಶದಂತೆ ಈ ರೀತಿಯ ಪ್ರತಿಭಟನೆಗೆ ಅವಕಾಶವಿರುವುದಿಲ್ಲ. ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿ ಪ್ರತಿಭಟನೆ ಮಾಡಿದ್ದಲ್ಲಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ನೋಟಿಸ್ ನಲ್ಲಿ ತಿಳಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಾರ್ಯಕ್ರಮದ ಆಯೋಜಕರು, ಕರ್ನಾಟಕದಲ್ಲಿ ಫ್ಯೂಡಲ್ ಅಧೀನದ ಪೊಲೀಸ್ ವ್ಯವಸ್ಥೆ ಜಾರಿಯಲ್ಲಿದೆಯೇ? ಹೈಕೋರ್ಟ್ ಆದೇಶವನ್ನು ತಿರುಚಿ ಸೌಜನ್ಯ ಪರ ಹೋರಾಟವನ್ನು ನಿಲ್ಲಿಸಲು ಪೊಲೀಸರು ರಾತ್ರಿ ಹಗಲು ಶ್ರಮಿಸುತ್ತಿರುವುದೇಕೆ? ಕಚೇರಿಯೊಳಗೆ ಸಮಾಲೋಚನಾ ಸಭೆ/ದಿಕ್ಸೂಚಿ ಸಭೆ ನಡೆಸುವಂತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

“ನಾಳೆ ಮನೆಯೊಳಗೂ ಮನೆ ಮಂದಿಯ ಜೊತೆಗೂ ಸೌಜನ್ಯ ಬಗ್ಗೆ ಮಾತನಾಡಬಾರದು ಎಂದು ಪೊಲೀಸರು ನೋಟಿಸ್ ನೀಡಬಹುದೇ? ಯಾರದ್ದೇ ವಿರುದ್ದ ಯಾರೇ ಅವಹೇಳನಕಾರಿಯಾಗಿ ಮಾತನಾಡಿದರೆ ಪೊಲೀಸರು ಕ್ರಮ ತೆಗೆದುಕೊಳ್ಳಬಹುದೇ ವಿನಃ ಸಮಾಲೋಚನಾ ಸಭೆಗಳ ಮೇಲಲ್ಲ. ಹಾಗಾಗಿ ಕಾನೂನು ತಜ್ಞರು ನಮಗೆ ನೀಡಿದ ವ್ಯಾಖ್ಯಾನದಂತೆ, ದಿನಾಂಕ 18.03.2025 ಮಂಗಳವಾರ ಸಂಜೆ 5 ಗಂಟೆಗೆ ನಡೆಸಲು ಉದ್ದೇಶಿಸಿದ ಸಾಹಿತಿ-ಚಿಂತಕ- ಹೋರಾಟಗಾರರ ದಿಕ್ಸೂಚಿ ಸಭೆ ಸಾಂಗವಾಗಿ ನಡೆಯಲಿದೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News