ಕಲಬುರಗಿ: ಪಿಎಸ್‍ಐ ರಿವಾಲ್ವರ್ ಕಸಿದು ಪರಾರಿಯಾಗಿದ್ದ ಕಳ್ಳತನ ಪ್ರಕರಣದ ಆರೋಪಿ ಪೊಲೀಸರ ವಶಕ್ಕೆ
ಕಲಬುರಗಿ, ಜು.17: ಪಿಎಸ್‍ಐ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಬೆನ್ನಟ್ಟಿ, ಆತನನ್ನು ಮನವೊಲಿಸಿ ಕೊನೆಗೂ ರಿವಾಲ್ವರ್ ವಾಪಸ್ ಪಡೆದ ಘಟನೆ ಅಫಜಲಪುರ ತಾಲೂಕಿನ ಬಳ್ಳೂರಗಿ ಬಳಿ ಸೋಮವಾರ ನಡೆದಿರುವುದಾಗಿ ವರದಿಯಾಗಿದೆ.
ಆರೋಪಿ ಖಾಜಪ್ಪ ಎಂಬುವವ ಅಫಜಲಪುರ ಪಿಎಸ್‍ಐ ಭೀಮರಾಯ್ ಬಂಕಲಿ ಅವರ ಪುಲ್ ಲೋಡೆಡ್ ಸರ್ವಿಸ್ ಪಿಸ್ತೂಲ್ ಕಸಿದುಕೊಂಡು ಪರಾರಿಯಾಗಿದ್ದ. ಅದಾದ ನಂತರ ಬಳ್ಳೂರಗಿ ಬಳಿ ಮರವೇರಿ ಆರೋಪಿಯು ಕುಳಿತಿದ್ದ ಎಂದು ಎಸ್‍ಪಿ ಇಶಾಪಂತ್ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿಗಳು ಆರೋಪಿಯನ್ನು ಕೆಳಗೆ ಇಳಿಯುವಂತೆ ಹೇಳಿದರೆ, ಪಿಸ್ತೂಲ್‍ನಿಂದ ಗುಂಡು ಹೊಡೆದುಕೊಳ್ಳುವುದಾಗಿ ಬೆದರಿಕೆ ಹಾಕುತ್ತಿದ್ದ. ಕೊನೆಗೆ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಮರದಿಂದ ಇಳಿದು ಬಂದು ಪಿಸ್ತೂಲ್ ಅನ್ನು ನಮಗೆ ಒಪ್ಪಿಸಿದ್ದಾನೆ ಎಂದು ಎಸ್‍ಪಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.
ಇನ್ನು ಆರೋಪಿ ಖಾಜಪ್ಪ ವಿರುದ್ಧ ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಅಧಿಕ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಈತ ಸೊನ್ನದ ಬಳಿ ಚೆಕ್ ಪೋಸ್ಟ್ ಕಡೆಗೆ ಬರುವ ಬಗ್ಗೆ ಅಕ್ಕಲಕೋಟೆ ಪೊಲೀಸರು ಮಾಹಿತಿ ನೀಡಿದ್ದರು. ಅದರ ಅನುಸಾರ 100ಕ್ಕೂ ಪೊಲೀಸ್ ಸಿಬ್ಬಂದಿ ಆರೋಪಿಗಾಗಿ ಹುಡುಕಾಟ ನಡೆಸಿದ್ದರು ಎಂದು ಎಸ್‍ಪಿ ಇಶಾ ಪಂತ್ ಹೇಳಿದ್ದಾರೆ.