ದರ್ಪದಿಂದ ವರ್ತಿಸುವುದು ಇಲಾಖೆಯ ಘನತೆಗೆ ತಕ್ಕ ನಡವಳಿಕೆಯಲ್ಲ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ
"ಪೊಲೀಸರು ಅಧಿಕಾರ ಚಲಾಯಿಸುವಾಗ ನಾಗರಿಕರೊಂದಿಗೆ ಸೌಜನ್ಯವಿರಲಿ"
ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ
ಬೆಂಗಳೂರು: ಪೊಲೀಸ್ ಅಧಿಕಾರಿಗಳು ತಮ್ಮ ಅಧಿಕಾರ ಚಲಾಯಿಸುವಾಗ ನಾಗರಿಕರೊಂದಿಗೆ ಸೌಜನ್ಯದಿಂದ ಮತ್ತು ಗೌರವದಿಂದ ವರ್ತಿಸಬೇಕು. ಅಧಿಕಾರ ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಮೇಲೆ ಅನಗತ್ಯ ಬಲ ಪ್ರಯೋಗ ಅಥವಾ ದರ್ಪದ ವರ್ತನೆ ತೋರುವುದು ಇಲಾಖೆಯ ಘನತೆಗೆ ತಕ್ಕುದಾದ ನಡವಳಿಕೆಯಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶುಕ್ರವಾರ ಈ ಬಗ್ಗೆ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸುತ್ತೋಲೆ ಹೊರಡಿಸಿರುವ ಅವರು, ಪೊಲೀಸ್ ಇಲಾಖೆಯ ಬಗ್ಗೆ ಸಮಾಜದಲ್ಲಿ ಉತ್ತಮ ಅಭಿಪ್ರಾಯ ಮೂಡಿಸಲು ಮತ್ತು ಸಮುದಾಯದ ಜೊತೆಗಿನ ಸಂಬಂಧವನ್ನು ಬಲಪಡಿಸಲು, ಕರ್ತವ್ಯ ನಿರ್ವಹಿಸುವಾಗ ಪಾರದರ್ಶಕತೆ, ಸೌಜನ್ಯದ ವರ್ತನೆ ಮತ್ತು ನಿಷ್ಠೆಯನ್ನು ಕಾಯ್ದುಕೊಳ್ಳಬೇಕು ಎಂದಿದ್ದಾರೆ.
ಪೊಲೀಸ್ ಠಾಣೆಗೆ ಭೇಟಿ ನೀಡುವ ಪ್ರತಿಯೊಬ್ಬ ವ್ಯಕ್ತಿಯನ್ನು ಅವರ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆ ನೋಡದೆ ಸಮಾನವಾಗಿ ಪರಿಗಣಿಸಬೇಕು. ಸಾರ್ವಜನಿಕರ ಕುಂದುಕೊರತೆಗಳನ್ನು ತಾಳ್ಮೆಯಿಂದ ಆಲಿಸಿ ಕಾನೂನು ಪ್ರಕಾರ ವಿಳಂಬವಿಲ್ಲದೆ ದೂರುಗಳನ್ನು ದಾಖಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಅಥವಾ ವರ್ತನೆಯನ್ನು ಸಂಪೂರ್ಣವಾಗಿ ತ್ಯಜಿಸಿ ಸೌಜನ್ಯ ಮತ್ತು ಘನತೆಯಿಂದ ವರ್ತಿಸಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಬೇಡಿಕೆ ಇಡುವುದು ಅಥವಾ ಅಕ್ರಮ ಸಹಾಯ, ಲಾಭ ಸ್ವೀಕರಿಸುವುದರಿಂದ ದೂರವಿರಬೇಕು ಎಂದು ಡಾ.ಎಂ.ಎ. ಸಲೀಂ ಸೂಚಿಸಿದ್ದಾರೆ.
ಸಂತ್ರಸ್ತರು, ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿ ಮತ್ತು ಸೂಕ್ಷ್ಮತೆಯಿಂದ ವರ್ತಿಸಬೇಕು. ಸಂಜೆ 6:00 ಗಂಟೆಯ ನಂತರ ಮಹಿಳೆಯರನ್ನು ವಿಚಾರಣೆಗಾಗಿ ಠಾಣೆಗೆ ಕರೆಯಬಾರದು. ಮಹಿಳಾ ಆರೋಪಿ ಅಥವಾ ಸಂತ್ರಸ್ತೆಯ ವಿಚಾರಣೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ನೆರವಿನೊಂದಿಗೆ ಆಕೆಯ ವಾಸದ ಸ್ಥಳದಲ್ಲೇ ನಡೆಸಬೇಕು ಎಂದು ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿತ ಠಾಣೆಗೆ ಹೋಗಲು ಹೇಳದೆ, ಶೂನ್ಯ ಪ್ರಥಮ ವರದಿ ದಾಖಲಿಸಿ ನಂತರ ವ್ಯಾಪ್ತಿಯ ಠಾಣೆಗೆ ವರ್ಗಾಯಿಸಬೇಕು. ಪೊಲೀಸ್-ಸಾರ್ವಜನಿಕ ಸಂವಹನದಲ್ಲಿ ನ್ಯಾಯಸಮ್ಮತತೆಯನ್ನು ಕಾಯ್ದುಕೊಳ್ಳಲು ದೇಹದ ಮೇಲೆ ಧರಿಸುವ ಕ್ಯಾಮೆರಾಗಳು ಮತ್ತು ಲಭ್ಯವಿರುವ ತಂತ್ರಜ್ಞಾನಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು ಎಂದು ಡಾ.ಎಂ.ಎ.ಸಲೀಂ ಅವರು ಸುತ್ತೋಲೆಯಲ್ಲಿ ಉಲ್ಲೇಖಿಸಿದ್ದಾರೆ.