ರಾಜ್ಯದಲ್ಲಿ ‘ಗೋಬಿ ಮಂಚೂರಿ, ಬಾಂಬೆ ಮಿಠಾಯಿ’ ನಿಷೇಧ ಸಾಧ್ಯತೆ?
Photo: ndtv.com/newindian express
ಬೆಂಗಳೂರು: ಗೋಬಿ ಮಂಚೂರಿ, ಬಾಂಬೆ ಮಿಠಾಯಿ(ಕಾಟನ್ ಕ್ಯಾಂಡಿ) ತಿಂಡಿ-ತಿನಿಸುಗಳಲ್ಲಿ ವಿಪರೀತ ವಿಷಕಾರಿ ಅಂಶ ಪತ್ತೆಯಾಗಿರುವ ಆರೋಪ ಹಿನ್ನೆಲೆ ಸರಕಾರವು ರಾಜ್ಯ ವ್ಯಾಪಿಯಲ್ಲಿ ಈ ಆಹಾರವನ್ನು ನಿಷೇಧಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ನಿಷೇಧ ವಿಚಾರಕ್ಕೆ ಪುಷ್ಟಿ ನೀಡುವಂತೆ ನಾಳೆ(ಮಾ.11)ಸೋಮವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ ನಡೆಸಲಿದ್ದು, ಮಧ್ಯಾಹ್ನ 12 ಗಂಟೆಗೆ ಗೋಬಿ ಮಂಚೂರಿ, ಬಾಂಬೆ ಮಿಠಾಯಿ ನಿಷೇಧದ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಇನ್ನೂ, ಈಗಾಗಲೇ ತಮಿಳುನಾಡು ರಾಜ್ಯದಲ್ಲಿ ಬಾಂಬೆ ಮಿಠಾಯಿ ಹಾಗೂ ಗೋವಾದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ.
ಬಾಂಬೆ ಮಿಠಾಯಿಯಲ್ಲಿ ಮಾರಕ ರೋಡಮೈನ್-ಬಿ ಅಂಶ ಪತ್ತೆಯಾಗಿದೆ. ಇದು ಕ್ಯಾನ್ಸರ್ ಕಾರಕವಾಗಿದ್ದು, ಮೆದುಳಿಗೂ ಹಾನಿ ಮಾಡುತ್ತದೆ. ಈ ಬಗ್ಗೆ ತಮಿಳುನಾಡಿನಲ್ಲಿ ಆಘಾತಕಾರಿ ವರದಿಯೊಂದು ಹೊರಬಿದ್ದಿತ್ತು. ತಮಿಳುನಾಡು ಬಳಿಕ ಈಗ ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ನಿಷೇಧಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಅದೇ ರೀತಿ, ಗೋಬಿ ಮಂಚೂರಿಯಲ್ಲೂ ವಿಷಕಾರಿ ಅಂಶ ಇರುವ ದೂರುಗಳಿವೆ. ಇದಕ್ಕೆ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹೀಗಾಗಿ ಗೋವಾ ಮಾದರಿಯಲ್ಲಿ ಕರ್ನಾಟಕದಲ್ಲೂ ಗೋಬಿ ಮಂಚೂರಿಯನ್ ನಿಷೇಧಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.