‌ಪ್ರಜ್ವಲ್ ಲೈಂಗಿಕ ಹಗರಣ | ನಮ್ಮ ಪೊಲೀಸರು ಸಮರ್ಥರಿದ್ದಾರೆ, ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ: ಜಿ.ಪರಮೇಶ್ವರ್

Update: 2024-05-08 14:48 GMT

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯತೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು.

ಸದಾಶಿವನಗರದಲ್ಲಿರುವ ಗೃಹ ಕಚೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದವರು. ಎಸ್ಐಟಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದು ಅವರಿಗೆ ಗೊತ್ತಿದೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ತನಿಖೆ ಯಾವ ರೀತಿ ಮುಂದುವರಿದಿದೆ ಎಂಬುದನ್ನು ಜನ ಸಮುದಾಯ ಗಮನಿಸುತ್ತಿದೆ. ಕೆಲವು ರಾಜಕೀಯ ಹೇಳಿಕೆಗಳನ್ನು ಹೊರತುಪಡಿಸಿದರೆ, ತನಿಖೆ ಸರಿಯಾದ ದಾರಿಯಲ್ಲಿ ಹೋಗುತ್ತಿದೆ. ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

2008-2013ರವರೆಗೆ ಅಂದಿನ ಸರ್ಕಾರ ಯಾವುದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿಲ್ಲ.‌ ಕೆಲವು ಪ್ರಕರಣಗಳಲ್ಲಿ ಸಿಬಿಐ ಕೊಟ್ಟ ವರದಿಯನ್ನು ಜನರು ಒಪ್ಪಿಲ್ಲ. ಅಂತಹ ಪ್ರಕರಣಗಳ ಸಿಬಿಐ ಕಾರ್ಯವೈಖರಿಯನ್ನು ಟೀಕಿಸಿದ್ದನ್ನು ನೋಡಿದ್ದೇವೆ. ಸಿಬಿಐ ಅಂದ ತಕ್ಷಣ ಏನೋ ಆಗಿ ಬಿಡುತ್ತದೆ ಎಂಬ ಪರಿಕಲ್ಪನೆ ಬೇಡ ಎಂದರು.

ಪ್ರಕರಣವನ್ನು ಎಸ್ಐಟಿಯವರು ಗಂಭೀರವಾಗಿ ತನಿಖೆ‌ ಮಾಡುತ್ತಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ದೇಶ‌ ಬಿಟ್ಟು ಹೋಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಅವರನ್ನು ಕರೆತರಲು ಬ್ಲೂ ಕಾರ್ನರ್‌ ನೋಟಿಸ್ ಹೊರಡಿಸಲಾಗಿದೆ. ಇಂಟರ್ ಪೋಲ್‌ನವರು 197 ದೇಶಗಳಿಗೆ ನೋಟಿಸ್ ಇಷ್ಯೂ ಮಾಡಿದ್ದಾರೆ ಎಂದು ತಿಳಿಸಿದರು.

ಪೆನ್‌ಡ್ರೈವ್ ಹಂಚಿಕೆ ಹಾಗೂ ಬಹಿರಂಗದ ಬಗ್ಗೆಯೂ ತನಿಖೆಯಾಗಲಿದೆ. ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರನ್ನು ವಿಚಾರಣೆ ನಡೆಸುವ ನಿರ್ಧಾರ ಎಸ್ಐಟಿ ಮಾಡಲಿದೆ. ಪ್ರಕರಣದಲ್ಲಿ ಕೆಲವರನ್ನು ವಿಚಾರಣೆ ಮಾಡಲಾಗುತ್ತಿಲ್ಲ ಎಂದು ಆರೋಪಿಸಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಯಾವಾಗ ವಿಚಾರಣೆ ನಡೆಸಬೇಕು, ಯಾವಾಗ ಬಂಧಿಸಬೇಕು ಎಂಬುದು ನಮ್ಮ ಕೈಯಲ್ಲಿ ಇಲ್ಲ. ಎಸ್ಐಟಿ ನಿರ್ಧರಿಸಲಿದೆ ಎಂದು ಹೇಳಿದರು.

ಟೆಕ್ನಿಕಲ್ ಆಗಿ ಕಾನೂನಿನ ಪ್ರಕಾರ ಬಂಧಿಸಲು ನಿಖರವಾದ ಸಾಕ್ಷ್ಯಗಳಿರಬೇಕು. ನಿಖರವಾದ ಸಾಕ್ಷ್ಯ ಇಲ್ಲದೆ ದೇವರಾಜೇಗೌಡ ಅಥವಾ ಕಾರ್ತಿಕ್‌ನನ್ನು ಬಂಧಿಸಲು ಸಾಧ್ಯವಾಗುವುದಿಲ್ಲ. ಅವರ ಹೇಳಿಕೆಯನ್ನು ಎಸ್ಐಟಿ ಪಡೆದುಕೊಂಡಿದೆ. ಹೇಳಿಕೆಯನ್ನು ಪುನರ್ ಪರಿಶೀಲಿಸುತ್ತಾರೆ. ಪ್ರಕರಣದ ಸಂತ್ರಸ್ತರಿಗೆ ಹೊರತುಪಡಿಸಿ, ಇಂತವರಿಗೆಲ್ಲ ರಕ್ಷಣೆ ಕೊಡುವುದಿಲ್ಲ. ಬಂಧಿಸಲು ಬೇಕಾದ ಅಗತ್ಯ ಸಾಕ್ಷ್ಯ ಸಿಕ್ಕ ಕೂಡಲೇ ಅರೆಸ್ಟ್ ಮಾಡಲಿದ್ದಾರೆ ಎಂದರು.

ವಿಷಯ ಗೊತ್ತಿರಬಾರದೇ? :

ಎಸ್ಐಟಿ ಅಧಿಕಾರಿಗಳಿಗೆ ಪ್ರಕರಣದ ತನಿಖೆಯನ್ನು ಹೀಗೆಯೇ ಮಾಡಿ ಅಂತ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಗೆ, ಗೃಹ ಸಚಿವರಿಗೆ ಪ್ರಕರಣದ ಮಾಹಿತಿ ಇರಬೇಕಲ್ಲವೇ?. ಹೀಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯಲಾಗಿದೆ ಎಂದರು.

ಬೆನ್ನುಮೂಳೆ ಇರುವುದರಿಂದ ಜನ ಅಧಿಕಾರ ನೀಡಿದ್ದಾರೆ: 

ನಮಗೆ ಬೆನ್ನು ಮೂಳೆ ಇರುವುದರಿಂದಲೇ ರಾಜ್ಯದ ಜನ 135 ಸೀಟುಗಳನ್ನು ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರು ತಾವೇ ಅಧಿಕಾರದಲ್ಲಿ ಕೂರಬೇಕು ಎಂಬ ಆಸೆ ಇತ್ತು. ಪಾಪ ಅದು ಅವರಿಗೆ ಆಗಲಿಲ್ಲ. ನಾವು ಅಧಿಕಾರದಲ್ಲಿದ್ದೀವಿ ಅಂತ ಕುಮಾರಸ್ವಾಮಿ ಅವರು ಸಂತೋಷಪಡಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News