ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣ | ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ಅನುಮತಿ
ಪ್ರಜ್ವಲ್ ರೇವಣ್ಣ
ಬೆಂಗಳೂರು : ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಪ್ರಜ್ವಲ್ ರೇವಣ್ಣ ವಿರುದ್ಧ ವಿಚಾರಣೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್, ಆರೋಪ ಪಟ್ಟಿ ರದ್ದು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿ, ಪ್ರಕರಣದಲ್ಲಿ ರೇವಣ್ಣ ಅವರಿಗೆ ಮಾತ್ರ ಸೀಮಿತವಾಗಿ ವಿಚಾರಣೆ ಮುಂದೂಡುವಂತೆ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ. ಪ್ರಜ್ವಲ್ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ ಎಂದರು.
ಇದನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಪೀಠ, ರೇವಣ್ಣ ವಿರುದ್ಧದ ನ್ಯಾಯಾಂಗ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲಾಗಿದೆ. ಹೀಗಾಗಿ, ಪ್ರಜ್ವಲ್ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಲು ಈ ಆದೇಶ ಅಡ್ಡಿಯಾಗದು ಎಂದು ತಿಳಿಸಿ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿದೆ.
ಇನ್ನು ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ ಅರ್ಜಿಗೆ ಆಕ್ಷೇಪಿಸಿದ ಪ್ರೊ.ರವಿವರ್ಮಾ ಕುಮಾರ್, ಇದೇ ತರನಾದ ಆರೋಪಗಳನ್ನು ಒಳಗೊಂಡಿರುವ ಇನ್ನೊಂದು ಪ್ರಕರಣದಲ್ಲಿ ವಿಚಾರಣೆ ಅಂತಿಮ ಹಂತದಲ್ಲಿದೆ. ಆ ಪ್ರಕರಣ ಮುಗಿದ ಕೂಡಲೇ ಈ ಪ್ರಕರಣ ಕೈಗೆತ್ತಿಕೊಳ್ಳುವಂತೆ ವಿಚಾರಣಾಧೀನ ನ್ಯಾಯಾಲಯವನ್ನು ಮನವಿ ಮಾಡಲಾಗಿದೆ. ಇದು ಮುಂದಿನ ವಾರ ಅಥವಾ 15 ದಿನಗಳಲ್ಲಿ ಆರಂಭವಾಗಬಹುದು ಎಂದು ತಿಳಿಸಿದರು.
ಆ ಕೂಡಲೇ ಪ್ರಜ್ವಲ್ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು, ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. 157 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಮೊದಲ ಜಾಮೀನು ಅರ್ಜಿ ತಿರಸ್ಕೃತವಾದಾಗಿನಿಂದ ವಿಚಾರಣೆ ಪ್ರಗತಿಯೇ ಕಂಡಿಲ್ಲ. ದೂರುದಾರೆಯ ಘನತೆಗೆ ಹಾನಿ ಮಾಡಿದ್ದೇವೆ ಎಂಬ ಆರೋಪವಿದೆ. ಸಂವಿಧಾನ 21ನೇ ವಿಧಿಯಡಿಯೂ ವಾದಿಸುತ್ತೇನೆ. ಪ್ರಜ್ವಲ್ ಜೈಲಿನಲ್ಲಿ ಜೀವನಕಳೆಯುವಂತೆ ಮಾಡಲಾಗದು ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿದೆ.