×
Ad

ಅತ್ಯಾಚಾರ ಪ್ರಕರಣದಲ್ಲಿ ರಾಜಕೀಯ ಪಿತೂರಿ; ಹೈಕೋರ್ಟ್‌ನಲ್ಲಿ ಪ್ರಜ್ವಲ್ ರೇವಣ್ಣ ಪರ ವಕೀಲರ ವಾದ

Update: 2025-12-01 20:51 IST

ಪ್ರಜ್ವಲ್‌ ರೇವಣ್ಣ

ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದು, ಇಡೀ ಪ್ರಕರಣದಲ್ಲಿ ರಾಜಕೀಯ ಪಿತೂರಿ ಅಡಗಿದೆ ಎಂದು ಪ್ರಜ್ವಲ್ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ಹೈಕೋರ್ಟ್‌ನಲ್ಲಿ ಬಲವಾಗಿ ಆಕ್ಷೇಪಿಸಿದರು.

ಮನೆಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವನ ಪರ್ಯಂತ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹಾಗೂ ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಪ್ರಜ್ವಲ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ, ಇಡೀ ಪ್ರಕರಣದಲ್ಲಿ ರಾಜಕೀಯ ಪಿತೂರಿ ನಡೆದಿದೆ. ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರಕಾರ ಪ್ರತೀಕಾರ ತೀರಿಸಿಕೊಳ್ಳಲು ಸಂತ್ರಸ್ತೆಯನ್ನು ಬಳಕೆ ಮಾಡಿಕೊಂಡಿದೆ. ಪ್ರಜ್ವಲ್‌ ಎಲ್ಲ ರೀತಿಯಲ್ಲೂ ತನಿಖೆಗೆ ಸಹಕರಿಸಿದ್ದಾರೆ. ಸಂತ್ರಸ್ತೆ 3 ವರ್ಷ ಮೌನವಾಗಿದ್ದರು. ಆನಂತರ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಅಶ್ಲೀಲ ಕೃತ್ಯ ನಡೆದ ನಂತರವೂ 2023ರಲ್ಲಿ ಸಂತ್ರಸ್ತೆ ಮತ್ತೆ ಹಾಸನದ ಗನ್ನಿಗಢ ತೋಟದ ಮನೆಗೆ ಹೋಗಿದ್ದರಾದರೂ, ತಾನು ತೊಡುತ್ತಿದ್ದ ಬಟ್ಟೆಯನ್ನು ಮರಳಿ ತಂದಿಲ್ಲ. ಪ್ರಜ್ವಲ್ ತಮ್ಮ ಮಾಜಿ ಕಾರು ಚಾಲಕನ (ಕಾರ್ತಿಕ್‌) ವಿರುದ್ಧ ದೂರು ನೀಡಿದ್ದಾರೆ. ಜತೆಗೆ, ಪ್ರಜ್ವಲ್‌ ಅವರ ಚುನಾವಣಾ ಏಜೆಂಟ್‌ ಈ ಕೃತ್ಯದ ಸಂಬಂಧ ದೂರು ನೀಡಿದ್ದಾರೆ. ಆದರೆ, ಆ ಪ್ರಕರಣದ ತನಿಖೆಯನ್ನು ಮಾತ್ರ ಸರಕಾರ ಏಕೆ ನಡೆಸಿಲ್ಲ ಎಂದು ಪ್ರಶ್ನಿಸಿದರು.

ಪ್ರಜ್ವಲ್ 2024ರ ಏಪ್ರಿಲ್‌ 24ರಂದು ದೇಶ ತೊರೆದಿದ್ದರು. ಅವರು ವಿದೇಶಕ್ಕೆ ತೆರಳುವಾಗ ಎಫ್‌ಐಆರ್‌ ದಾಖಲಾಗಿರಲಿಲ್ಲ. ಏಪ್ರಿಲ್‌ 28ರಂದು ಎಫ್‌ಐಆರ್‌ ದಾಖಲಾಗಿತ್ತು. ಆನಂತರ, ಮೇ ತಿಂಗಳಿನಲ್ಲಿ ಸ್ವದೇಶಕ್ಕೆ ಮರಳಿದಾಗ ಅವರನ್ನು ಬಂಧಿಸಲಾಗಿತ್ತು. ಪ್ರಜ್ವಲ್ ತಮ್ಮ ಆ್ಯಪಲ್‌ ಫೋನ್‌ ಅನ್ನು ತನಿಖಾಧಿಕಾರಿಗೆ ಒಪ್ಪಿಸಿಲ್ಲ ಎಂದು ಹೇಳಲಾಗಿದೆ. ಆದರೆ, ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿಯಲ್ಲಿ ಮೊಬೈಲ್‌ ನೀಡುವಂತೆ ಪ್ರಜ್ವಲ್‌ಗೆ ಯಾವುದೇ ನೋಟಿಸ್‌ ನೀಡಿಲ್ಲ. ಐಎಂಇಐ ನಂಬರ್‌ ಆಧರಿಸಿ ಮೊಬೈಲ್‌ ಕಂಪನಿಯಿಂದ ಮಾಹಿತಿ ಪಡೆಲು ಸಹ ಪೊಲೀಸರು ಯತ್ನಿಸಿಲ್ಲ ಎಂದು ಆಕ್ಷೇಪಿಸಿದರು.

ಪ್ರಜ್ವಲ್‌ ನಡೆಸಿದ್ದಾರೆ ಎನ್ನಲಾದ ಕೃತ್ಯದ ಆಯ್ದ ವಿಡಿಯೊಗಳನ್ನು ಮಾತ್ರ ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗಿದೆ. 2025ರ ಮೇ 2ರಿಂದ ಜೂನ್‌ 20ರವರೆಗೆ 13 ಸಾಕ್ಷ್ಯಗಳನ್ನು ಪ್ರಾಸಿಕ್ಯೂಟ್‌ ಮಾಡಲಾಗಿದ್ದು, ಐದು ಸಾಕ್ಷ್ಯಗಳನ್ನು ಮರುವಿಚಾರಣೆಗೆ ಒಳಪಡಿಸಲಾಗಿದೆ. ಜುಲೈ 18ರಂದು ಅಂತಿಮ ವಿಚಾರಣೆ ಮುಗಿದಿದೆ. ಒಟ್ಟಾರೆ 90 ದಿನದಲ್ಲಿ ವಿಚಾರಣೆ ಮುಗಿದಿದೆ. ವಿಶೇಷ ನ್ಯಾಯಾಧೀಶರು 10 ದಿನ ರಜೆ ಇದ್ದರು, 12 ದಿನ ಸಾರ್ವಜನಿಕ ರಜೆ ಇತ್ತು. ಹೀಗಿರುವಾಗ, ಪ್ರಜ್ವಲ್‌ ವಿಚಾರಣೆ ವಿಳಂಬಗೊಳಿಸಿದ್ದಾರೆ ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಂಗಾಂಗ, ವಂಶವಾಹಿ ಹೊಂದಿಕೆಯಾಗಿದೆ:

ಪ್ರಕರಣದ ತನಿಖೆಗೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಪರ ವಾದ ಮಂಡಿಸಿದ ವಿಶೇಷ ಸರಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು, ವ್ಯಾಪಕವಾಗಿ ಹರಿದಾಡಿದ್ದ ಅಶ್ಲೀಲ ವಿಡಿಯೊದಲ್ಲಿದ್ದ ಅಂಗಾಂಗ, ಬಟ್ಟೆ ಹಾಗೂ ಸಂತ್ರಸ್ತೆಯ ಬಟ್ಟೆ ಮೇಲಿನ ವಂಶವಾಹಿ ಪ್ರಜ್ವಲ್‌ ಅವರೊಂದಿಗೆ ಹೊಂದಿಕೆಯಾಗಿದೆ. ಪ್ರಕರಣದಲ್ಲಿ ಅಪಾರವಾದ ಡಿಜಿಟಲ್‌ ಸಾಕ್ಷ್ಯಗಳು ಲಭ್ಯವಿದ್ದು, ಇದ್ಯಾವುದನ್ನೂ ಪ್ರಜ್ವಲ್‌ ಪರ ವಕೀಲರು ಅಲ್ಲಗಳೆದಿಲ್ಲ ಎಂದು ಪ್ರತಿಪಾದಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಲಿಖಿತ ವಾದಾಂಶ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News