ಪ್ರಜ್ವಲ್ ರೇವಣ್ಣಗೆ ಶಿಕ್ಷೆ: ಕರ್ನಾಟಕವನ್ನು ತಲ್ಲಣಗೊಳಿಸಿದ ಲೈಂಗಿಕ ಹಗರಣ
PC: x.com/about_karnataka
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದ ಲೈಂಗಿಕ ಹಗರಣ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಪ್ರಜ್ವಲ್ ರೇವಣ್ಣಗೆ ಶಿಕ್ಷೆಯ ಪ್ರಮಾಣವನ್ನು ಸದ್ಯದಲ್ಲೇ ಪ್ರಕಟಿಸಲಿದೆ.
ಮಾಜಿ ಸಂಸದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಗ ಮತ್ತು ಹಾಸನದಲ್ಲಿ ರಾಜಕೀಯ ಉತ್ತರಾಧಿಕಾರಿ ಎಂದೇ ಹೇಳಲಾಗಿದ್ದ ಪ್ರಜ್ವಲ್ ರೇವಣ್ಣ, ಹಲವು ಮಹಿಳೆಯರೊಂದಿಗೆ ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿ ಸಂಗ್ರಹಿಸಿದ್ದ ಫೋಲ್ಡರ್ ವೈರಲ್ ಆಗುವ ಮೂಲಕ ಈ ಪ್ರಕರಣವು ಬೆಳಕಿಗೆ ಬಂದಿತ್ತು.
50ಕ್ಕೂ ಅಧಿಕ ಅಶ್ಲೀಲ ವೀಡಿಯೋಗಳು ಮತ್ತು 2,000 ಕ್ಕೂ ಹೆಚ್ಚು ಫೊಟೋಗಳು, ಆಘಾತಕಾರಿ ಕೃತ್ಯವನ್ನು ಬಯಲಿಗೆಳೆದವು. 2024ರ ಲೋಕಸಭಾ ಚುನಾವಣೆಗೆ ಮುಂಚೆಯೇ ಪ್ರಜ್ವಲ್ ರೇವಣ್ಣ ಅವರ ಮಾಜಿ ಚಾಲಕರು ಒಬ್ಬರು ಈ ವಿಡಿಯೋಗಳನ್ನು ಬಹಿರಂಗಗೊಳಿಸಿದರು. ಸ್ವತಃ ಪ್ರಜ್ವಲ್ ಅವರೇ ಚಿತ್ರೀಕರಿಸಿಕೊಂಡಿದ್ದ ಈ ದೃಶ್ಯಗಳು ತನಿಖಾಧಿಕಾರಿಗಳಿಗೆ ಮಹತ್ವದ ಸಾಕ್ಷಿಯಾಗಿ ಪರಿಣಮಿಸಿತು. ಈ ಹಗರಣವು ಸಾರ್ವಜನಿಕರಲ್ಲಿ ಆಕ್ರೋಶ ಸೃಷ್ಟಿಸಿತು.
ವಿವಿಧ ರೆಸಾರ್ಟ್ಗಳು, ಫಾರ್ಮ್ ಹೌಸ್ಗಳು, ಸರ್ಕಾರಿ ಕ್ವಾರ್ಟರ್ಸ್ ಗಳು ಮತ್ತು ಮನೆಗಳಲ್ಲೂ ಚಿತ್ರೀಕರಿಸಲಾದ ಈ ದೃಶ್ಯಗಳು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಪಟ್ಟಿರುವ 70ಕ್ಕೂ ಹೆಚ್ಚು ಸಂತ್ರಸ್ತೆಯರನ್ನು ಗುರುತಿಸಲು ಸಹಾಯವಾಯಿತು. ಇವರಲ್ಲಿ ಬಹುತೇಕ ಮಂದಿ ಮರ್ಯಾದೆಗೆ ಅಂಜಿ, ಕುಟುಂಬದ ಒತ್ತಡದಿಂದ ದೂರು ದಾಖಲಿಸಲು ಹಿಂದೇಟು ಹಾಕಿದರು. ಆದರೆ ಸಂತ್ರಸ್ತೆಯರ ಪೈಕಿ ನಾಲ್ವರು ಮಹಿಳೆಯರು, ಅದರಲ್ಲಿ ಒಬ್ಬರು 48 ವರ್ಷದ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಮತ್ತೊಬ್ಬರು ರಾಜಕೀಯ ಪಕ್ಷದ ಕಾರ್ಯಕರ್ತೆ ಎಲ್ಲ ಅಡೆತಡೆಗಳನ್ನು ಮೀರಿ ದಿಟ್ಟತನದಿಂದ ಪ್ರಜ್ವಲ್ ವಿರುದ್ಧ ದೂರು ದಾಖಲಿಸಿದ್ದು ಪ್ರಕರಣಕ್ಕೆ ಮಹತ್ವದ ತಿರುವ ನೀಡಿತ್ತು.
ಮೂವರು ಮಹಿಳೆಯರು ಪ್ರಜ್ವಲ್ ರೇವಣ್ಣ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದು, ಒಬ್ಬರು ಲೈಂಗಿಕ ಕಿರುಕುಳ ಆರೋಪಿಸಿದ್ದರು.
ಹಾಸನ ಜಿಲ್ಲೆಯಾದ್ಯಂತ ನೂರಾರು ಪೆನ್ ಡ್ರೈವ್ಗಳ ಮೂಲಕ ಪ್ರಸಾರವಾದ ವಿಡಿಯೋಗಳು, ಈ ಪ್ರಕರಣವನ್ನು ಊರೂರಿಗೂ ತಲುಪಿಸಿತ್ತು. ಆ ಮೂಲಕ ರಾಜಕೀಯವಾಗಿ ದೇವೇಗೌಡರ ಕುಟುಂಬದ ಭದ್ರಕೋಟೆಯನ್ನೇ ಅಲುಗಾಡಿಸಿತು. ಲೈಂಗಿಕ ಹಗರಣದ ಆರಂಭದಿಂದಲೂ ಪ್ರಜ್ವಲ್ ಅವರ ಕುಟುಂಬವು, ಈ ವೀಡಿಯೋಗಳು ನಕಲಿಯಾಗಿದ್ದು, ರಾಜಕೀಯವಾಗಿ ಕುಟುಂಬದ ವರ್ಚಸ್ಸಿಗೆ ದಕ್ಕೆ ತರಲು ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ನಾವು ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ ಎಂದು ಹೇಳಿಕೆ ನೀಡಿ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡರು.