ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಪೊಲೀಸ್ ಭದ್ರತೆ ಹೆಚ್ಚಿಸಿದ ಸರಕಾರ
ಪ್ರಿಯಾಂಕ್ ಖರ್ಗೆ
ಬೆಂಗಳೂರು, ಅ.15: ಸರಕಾರಿ ಶಾಲೆ ಮತ್ತು ಕಾಲೇಜು ಆವರಣಗಳಲ್ಲಿ ಆರೆಸ್ಸೆಸ್ ಸಂಘಟನೆಯ ಚಟುವಟಿಕೆಗಳನ್ನು ನಿಷೇಧ ಮಾಡುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಧ್ವನಿಗೂಡಿಸಿರುವ ಹಿನ್ನೆಲೆ ಅವರಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿದ್ದು, ಈ ಸಂಬಂಧ ರಾಜ್ಯ ಸರಕಾರ ಅವರಿಗೆ ಪೊಲೀಸ್ ಇಲಾಖೆ ಭದ್ರತೆ ಹೆಚ್ಚಿಸಿದೆ.
ಆರೆಸ್ಸೆಸ್ ಚಟುವಟಿಕೆಗಳಿಗೆ ನಿಷೇಧ ಕೋರಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆಯಿಂದಲೇ ಸಚಿವರ ಖಾಸಗಿ ಮನೆ ಮತ್ತು ಸರಕಾರಿ ನಿವಾಸಕ್ಕೆ ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಇಲ್ಲಿನ ಗಲ್ಫ್ ಕ್ಲಬ್ ರಸ್ತೆಯಲ್ಲಿರುವ ಸರಕಾರಿ ನಿವಾಸದ ಬಳಿ ಸುಮಾರು 50 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಸಚಿವರನ್ನು ಭೇಟಿ ಮಾಡುವ ಸಾರ್ವಜನಿಕರನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಹೇಳಿದ್ದಾರೆ.
ಹೇಡಿಗಳಿಂದ ಪ್ರಿಯಾಂಕ್ ಖರ್ಗೆಗೆ ಬೆದರಿಕೆ: ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿಷೇಧಿಸಬೇಕೆಂದು ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಗುರಿಯಾಗಿಸಿಕೊಂಡು ಬೆದರಿಕೆ ಹಾಕುತ್ತಿರುವವರು ಹೇಡಿಗಳು ಎಂದು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್‍ನವರು ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳನ್ನು ಮಾಡುವ ಮೂಲಕ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ.ಆದರೆ, ಇದು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಬೆದರಿಕೆ ಆಗಿದ್ದು, ಇಂತಹ ಹೇಡಿಗಳಿಗೆ ನಾವು ಹೆದರುವುದಿಲ್ಲ ಎಂದರು.
ವೈಚಾರಿಕವಾಗಿ ಬಹಿರಂಗ ಚರ್ಚೆಗೆ ಬರಲಿ, ನಾವು ದಿಟ್ಟ ಉತ್ತರ ನೀಡುತ್ತೇವೆ. ಆದರೆ, ಜೀವ ಬೆದರಿಕೆಗೆ ಹಾಕುವ ಹಂತಕ್ಕೆ ಹೋಗುವುದು ಒಳ್ಳೆಯ ಬೆಳವಣಿಗೆ ಅಲ್ಲ. ಆರೆಸ್ಸೆಸ್‍ನವರು ಲಾಠಿ ಹಿಡಿದು ಧರ್ಮ ರಕ್ಷಣೆ ಮಾಡುತ್ತೇವೆ ಎನ್ನುತ್ತಾರೆ. ಲಾಠಿಗೂ ಧರ್ಮಕ್ಕೆ ಸಂಬಂಧವೇನು? ಹೃದಯದಿಂದ ಧರ್ಮ ಕಟ್ಟಬೇಕೆ ಹೊರತು ಹಿಂಸೆಯಿಂದ ಅಲ್ಲ ಎಂದು ಅಭಿಪ್ರಾಯಪಟ್ಟರು.
ಪರಿಶೀಲಿಸಿ ಕ್ರಮ:
‘ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆದರಿಕೆ ಕರೆಗಳು ಬಂದಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.ಯಾರು ಬೆದರಿಕೆ ಕರೆ ಮಾಡಿದ್ದಾರೆ, ಎಲ್ಲಿಂದ ಬಂದಿದೆ ಎಂಬುದನ್ನು ತನಿಖೆ ಮಾಡುತ್ತೇವೆ. ಆರೆಸ್ಸೆಸ್ ವಿಚಾರದಲ್ಲಿ ಸಚಿವರು ತಮ್ಮ ಅಭಿಪ್ರಾಯ ಹೇಳಿರಬಹುದು. ಆ ಬಗ್ಗೆ ಸರಕಾರ ತೀರ್ಮಾನ ಮಾಡುತ್ತದೆ. ಅದಕ್ಕೆ ಅವರಿಗೆ ಬೆದರಿಕೆ ಮಾಡುವುದು ಸರಿಯಲ್ಲ’
-ಡಾ.ಜಿ.ಪರಮೇಶ್ವರ್, ಗೃಹ ಸಚಿವ
‘ನಾವು ಹೆಚ್ಚು ಶಕ್ತಿಶಾಲಿಯಾದಷ್ಟು, ಶತ್ರುಗಳು ಹೆಚ್ಚು. ಕಡಿಮೆ ಶಕ್ತಿ ಇದ್ದರೆ ಕಡಿಮೆ ಶತ್ರುಗಳು. ಶಕ್ತಿಯೇ ಇಲ್ಲದಿದ್ದರೆ, ಶತ್ರುಗಳೂ ಇರುವುದಿಲ್ಲ’
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ