ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಿಸಿ, ಗೋ ರಕ್ಷಣೆಗಾಗಿ ರಸ್ತೆಗೆ ಬಿಡಲಿ : ಪ್ರಿಯಾಂಕ್ ಖರ್ಗೆ ವಾಗ್ದಾಳಿ
"ಆರೆಸ್ಸೆಸ್ ಶಾಖೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಮಕ್ಕಳಿಲ್ಲ"
ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು, ಅ. 17: ‘ಸರಕಾರಿ ಸ್ವತ್ತುಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ನಿರ್ಬಂಧಿಸಿರುವ ಸಂಪುಟ ತೀರ್ಮಾನದಲ್ಲಿ ಯಾವುದೇ ಒಂದು ಸಂಘಟನೆಯ ಹೆಸರಿಲ್ಲ. ಹಾಗಿದ್ದರೂ ಬಿಜೆಪಿ ನಾಯಕರು ನೊಂದುಕೊಳ್ಳುತ್ತಿರುವುದೇಕೆ?’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿಷೇಧಿಸಿದ್ದೇವೆ ಎಂದು ನಾವು ಎಲ್ಲಿಯೂ ಹೇಳಲಿಲ್ಲ. ಏಕರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಇದರಲ್ಲಿ ನಾವು ಕೇಳುತ್ತಿರುವುದರಲ್ಲಿ ಅಕ್ರಮವಿದೆಯೇ? ಅಥವಾ ನ್ಯಾಯಯುತವೇ? ಎಂಬುದಕ್ಕೆ ಬಿಜೆಪಿಗರು ಉತ್ತರ ನೀಡಬೇಕು. ಇವರಿಗೆ ಇಷ್ಟೊಂದು ಭಯ ಏಕೆ? ಎಂದು ಪ್ರಶ್ನಿಸಿದರು.
ಸರಕಾರ ಸರಿ ಇಲ್ಲ ಎಂದಾದರೆ, ಬೀದಿಗಿಳಿದು ಹೋರಾಟ ನಡೆಸಲಿ. ಅವರನ್ನು ಯಾರೂ ಬೇಡ ಎಂದಿಲ್ಲ. ಬುದ್ಧ-ಬಸವ ಅಂಬೇಡ್ಕರ್ ತತ್ವವನ್ನು ರಾಜ್ಯದಲ್ಲಿ ಪಾಲಿಸಲು ಹೊರಟಿದ್ದೇವೆ. ಪ್ರಬುದ್ಧ ಸಮಾಜ ತರುವ ಪ್ರಯತ್ನ ಮಾಡುತ್ತಿದ್ದೇವೆ. ಪ್ರಬುದ್ಧತೆ ಇದ್ದರೆ, ಸಮೃದ್ಧ ಸಮಾಜ ಇರಲಿದೆ ಎಂದು ಸಚಿವರು ನುಡಿದರು.
ಆರೆಸ್ಸೆಸ್ ಶಾಖೆಯಲ್ಲಿ ಬಿಜೆಪಿಯ ಪ್ರಭಾವಿ ನಾಯಕರ ಮಕ್ಕಳಿಲ್ಲ. ಈ ಬಗ್ಗೆ ನನ್ನ ತಕರಾರು ಇದೆ. ಬಡವರ ಮಕ್ಕಳನ್ನು ಗೋ ರಕ್ಷಣೆ, ಧರ್ಮ ರಕ್ಷಣೆ ಎಂದು ದುರ್ಬಳಕೆ ಮಾಡಿಕೊಳ್ಳುತ್ತಿರುವ ನಾಯಕರು ತಮ್ಮ ಮಕ್ಕಳಿಗೆ ತ್ರಿಶೂಲ ದೀಕ್ಷೆ ಕೊಡಿಸಿ, ಗೋ ರಕ್ಷಣೆಗಾಗಿ ರಸ್ತೆಗೆ ಬಿಡಲಿ, ಗೋ ಮೂತ್ರ ಕುಡಿಯಲು ಹೇಳಲಿ, ಗಣವೇಷ ಧರಿಸಿ, ಧರ್ಮ ರಕ್ಷಣೆ ಮಾಡಲಿ. ಆಗ ನನ್ನ ಮಾತುಗಳನ್ನು ನಿಲ್ಲಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.