‘ಜೀವ ಬೆದರಿಕೆ’ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ವಿರುದ್ಧ ಡಿಜಿಪಿಗೆ ದೂರು : ಪ್ರಿಯಾಂಕ್ ಖರ್ಗೆ
ಬೆಂಗಳೂರು, ಅ. 18: ಕಲಬುರಗಿ ಜಿಲ್ಲೆಯ ಚಿತ್ತಾಪುರ ಬಿಜೆಪಿ ಅಭ್ಯರ್ಥಿಯಿಂದ ನನಗೆ ಜೀವ ಬೆದರಿಕೆ ಬಂದಿದ್ದು, ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವ್ಯಕ್ತಿ ನನಗೆ ಕರೆ ಮಾಡಿ ನೇರವಾಗಿ ಬೆದರಿಕೆ ಹಾಕಿದ್ದಾರೆ. ಆರೆಸ್ಸೆಸ್‍ನವರು ದೇಶಭಕ್ತರು, ಮನೆಗೆ ನುಗ್ಗಿ ಹೊಡೆಯುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ ಎಂದು ಉಲ್ಲೇಖಿಸಿದರು.
ಹೀಗೆ ಬೆದರಿಕೆ ಹಾಕಿದರೆ ನಾವು ಸಹಿಸಬೇಕೇ? ಈ ಬೆದರಿಕೆ ವಿರುದ್ಧ ನಾನು ಡಿಜಿಪಿ ಮತ್ತು ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ. ನಾನು ಜನರಿಂದ ಆಯ್ಕೆಯಾದ ಜನಪ್ರತಿನಿಧಿ. ಬಿಜೆಪಿ ಅಭ್ಯರ್ಥಿ ಸವಾಲು ಹಾಕುತ್ತಿರುವುದು ನನಗಲ್ಲ, ರಾಜ್ಯದ ಕಾನೂನಿಗೆ. ಹೀಗೆ ಎಲ್ಲರೂ ಕಾನೂನು ಪಾಲಿಸುವುದಿಲ್ಲವೆಂದರೆ ದೇಶದ ಗತಿ ಏನಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.