×
Ad

ಸುಳ್ಳು ಮಾಹಿತಿ ನಿಯಂತ್ರಣ ಮಸೂದೆ ಮಂಡನೆಗೆ ಸಿದ್ಧತೆ : ಸಚಿವ ಪ್ರಿಯಾಂಕ್ ಖರ್ಗೆ

Update: 2025-11-08 23:35 IST

ಬೆಂಗಳೂರು : ಪ್ರಸ್ತಾವಿತ ಸುಳ್ಳು ಮಾಹಿತಿ ನಿಯಂತ್ರಣ ಮಸೂದೆಯು ಸುಳ್ಳು ಸುದ್ದಿಗಳನ್ನು ಹರಡುವ ವ್ಯಕ್ತಿಗಳು ಮತ್ತು ಅಂತಹ ತಪ್ಪು ಮಾಹಿತಿ, ಅಪಪ್ರಚಾರ ದುರುದ್ದೇಶಪೂರಿತ ಮಾಹಿತಿ ಹಾಗೂ ನಕಲಿ ಸುದ್ದಿಗಳನ್ನು ವರ್ಧಿಸುವ ವೇದಿಕೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಶುಕ್ರವಾರ ಸಂಜೆ ನಗರದ ಖಾಸಗಿ ಹೊಟೇಲ್‍ನಲ್ಲಿ ಆಯೋಜಿಸಿದ್ದ ‘ಸತ್ಯ, ವಿಶ್ವಾಸ ಮತ್ತು ತಂತ್ರಜ್ಞಾನ’ ಕುರಿತ ನೀತಿ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಸುಳ್ಳು ಮಾಹಿತಿಯು ಉದ್ದೇಶಪೂರ್ವಕ ಮತ್ತು ತೀವ್ರವಾಗಿ ಸಮಾಜಕ್ಕೆ ಹಾನಿಯುಂಟು ಮಾಡುವ ಕಾರಣ, ಇದು ಅತ್ಯಂತ ಅಪಾಯಕಾರಿ ಎಂದು ಹೇಳಿದರು.

ಈ ಬೆದರಿಕೆಯು ತಂತ್ರಜ್ಞಾನದಿಂದ, ವಿಶೇಷವಾಗಿ ಈಗ ಸುಲಭವಾಗಿ ಲಭ್ಯವಿರುವ ಮತ್ತು ಕೈಗೆಟುಕುವ ಎಐ ಪರಿಕರಗಳ ಆವಿಷ್ಕಾರದಿಂದಾಗಿ ಹೆಚ್ಚಿದೆ. ಯಾರಾದರೂ ಈಗ ಡೀಪ್‍ಫೇಕ್ ವೀಡಿಯೊಗಳು, ಧ್ವನಿ ಕ್ಲೋನಿಂಗ್ ಮತ್ತು ಸಂಪೂರ್ಣವಾಗಿ ಅಧಿಕೃತವೆಂದು ತೋರುವ ದಾಖಲೆಗಳನ್ನು ಸೃಷ್ಟಿಸಬಹುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

‘ಒಂದು ಸಿಂಗಲ್ ಕ್ಲಿಕ್’ ಗೊಂದಲಕ್ಕೆ ಕಾರಣವಾಗಬಹುದು. ಆದುದರಿಂದ, ನಾವು ತಪ್ಪು ಮಾಹಿತಿ, ಅಪಪ್ರಚಾರ, ದುರುದ್ದೇಶಪೂರಿತ ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ನಿಯಂತ್ರಿಸಲು ಕಾನೂನುಗಳನ್ನು ತರಲು ಬಯಸುತ್ತೇವೆ. ಅಲ್ಲದೆ, ತಮ್ಮದೆ ಸಾರ್ವಜನಿಕ ನೀತಿಗಳನ್ನು ಉಲ್ಲಂಘಿಸುವ ಮೂಲಕ ಇಂತಹ ಅಪಪ್ರಚಾರವನ್ನು ವರ್ಧಿಸುವ ವೇದಿಕೆಗಳನ್ನು ನಿಯಂತ್ರಿಸಲೂ ನಾವು ಬಯಸುತ್ತೇವೆ ಎಂದು ಅವರು ತಿಳಿಸಿದರು.

ಅಂತಹ ಮಾಹಿತಿಯನ್ನು ತಮ್ಮ ವೇದಿಕೆಯಲ್ಲಿ ಪ್ರಸಾರ ಮಾಡಲು ಅವಕಾಶ ನೀಡುವ ಮೂಲಕ, ಅವುಗಳು ಕೂಡ ಪರೋಕ್ಷವಾಗಿ ಜವಾಬ್ದಾರವಾಗಿರುತ್ತವೆ. ಎಲ್ಲವನ್ನೂ ವೇದಿಕೆಗಳು ಮೇಲ್ವಿಚಾರಣೆ ಮಾಡುವುದು ಸುಲಭವಲ್ಲ, ಆದರೆ ನಾವು ಈ ವೇದಿಕೆಗಳು ಮತ್ತು ದೇಶದ ಕಾನೂನುಗಳನ್ನು ಒಂದೆ ಚೌಕಟ್ಟಿನಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಮಸೂದೆಯನ್ನು ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಭರವಸೆ ಇದೆ. ರಾಜ್ಯ ಸರಕಾರವು ಸುಳ್ಳು ಸುದ್ದಿ ಹರಡುವವರ ಹೆಸರನ್ನು ಬಹಿರಂಗಪಡಿಸಿ ಅವರನ್ನು ನಾಚಿಕೆಪಡಿಸುವ ಗುರಿಯನ್ನು ಹೊಂದಿದೆ, ಆದರೆ ವಾಕ್ ಸ್ವಾತಂತ್ರ್ಯ, ಸೃಜನಶೀಲತೆ, ವಿಡಂಬನೆ ಮತ್ತು ಅಭಿಪ್ರಾಯಗಳನ್ನು ಮೊಟಕುಗೊಳಿಸುವ ಉದ್ದೇಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಪೂವಯ್ಯ ಅಂಡ್ ಕಂ ಪಾಲುದಾರರಾದ ಮನು ಕುಲಕರ್ಣಿ ಮಾತನಾಡಿ, ಮೊದಲನೆಯದಾಗಿ, ಹಾನಿಕಾರಕ ಮತ್ತು ಗೊಂದಲಕ್ಕೆ ಕಾರಣವಾದ ಮಾಹಿತಿಯ ಮೇಲೆ ನಿಜವಾಗಿಯೂ ಮೊಕದ್ದಮೆ ಹೂಡುವುದಿಲ್ಲ, ಅದನ್ನು ಎಂದಿಗೂ ಕಾನೂನಿನ ಅಡಿಗೆ ತರುವುದಿಲ್ಲ. ಹಾಗಾಗಿ, ಹೊಸ ಕಾನೂನುಗಳನ್ನು ಮಾಡುವುದು, ಹೊಸ ಸಂಸ್ಥೆಗಳನ್ನು ಸೃಷ್ಟಿಸುವುದು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಎನ್‍ಎಲ್‍ಎಸ್‍ಐಯು ಉಪಾಧ್ಯಕ್ಷ ಸುಧೀರ್ ಕೃಷ್ಣಸ್ವಾಮಿ ಅವರು, ಕ್ರಿಮಿನಲ್-ಕಾನೂನು-ಕೇಂದ್ರಿತ ಶಾಸನದಿಂದ ದೂರವಿರಬೇಕು ಮತ್ತು ವ್ಯಕ್ತಿ ಹಾಗೂ ವೇದಿಕೆಗಳೆರಡರ ಮಟ್ಟದಲ್ಲಿ ಹೊಣೆಗಾರಿಕೆಯನ್ನು ಪರಿಚಯಿಸಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News