×
Ad

ʼಸಚಿವ ಸ್ಥಾನ ನಿಮ್ಮ ಪ್ರತಿಭೆಗೆ ಸಿಕ್ಕ ಅವಕಾಶವಲ್ಲʼ : ಪ್ರಿಯಾಂಕ್ ಖರ್ಗೆಗೆ ಆರ್.ಅಶೋಕ್ ತಿರುಗೇಟು

Update: 2025-08-10 19:10 IST

ಪ್ರಿಯಾಂಕ್‌ ಖರ್ಗೆ/ಆರ್‌.ಅಶೋಕ್‌

ಬೆಂಗಳೂರು : ‘ನಿಮಗೆ ಸಿಕ್ಕಿರುವ ಸಚಿವ ಸ್ಥಾನವೂ ನಿಮಗೆ ದೊರಕಿದ ಸಮ್ಮಾನವಲ್ಲ ಅಥವಾ ನಿಮ್ಮ ಪ್ರತಿಭೆಗೆ ಸಿಕ್ಕ ಅವಕಾಶವಲ್ಲ, ಅದು ನಿಮ್ಮ ತಂದೆ(ಮಲ್ಲಿಕಾರ್ಜುನ ಖರ್ಗೆ)ಯವರನ್ನು ಸಮಾಧಾನ ಪಡಿಸುವ ಸಮಾಧಾನಕರ ಬಹುಮಾನ ಅಷ್ಟೇ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ತಿರುಗೇಟು ನೀಡಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಆರ್.ಅಶೋಕ್, ‘ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ, 83 ವರ್ಷದ ಇಳಿ ವಯಸ್ಸಿನಲ್ಲೂ 55 ವರ್ಷದ ಚಿರಯುವಕ, ನಾಲಾಯಕ್ ರಾಹುಲ್ ಗಾಂಧಿ ಅವರೇ ನಮ್ಮ ನಾಯಕ ಎಂದು ಸಲಾಮು ಹೊಡೆದುಕೊಂಡು ಓಡಾಡುವ ದುಸ್ಥಿತಿ ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರಬಾರದಿತ್ತು’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ತಮ್ಮ ಮಕ್ಕಳಿಗೆಲ್ಲಾ ಪ್ರಿಯದರ್ಶಿನಿ, ಪ್ರಿಯಾಂಕ, ರಾಹುಲ್ ಎಂದು ಹೆಸರಿಟ್ಟು ನಕಲಿ ಗಾಂಧಿ ಕುಟುಂಬಕ್ಕೆ ಎಷ್ಟು ನಿಷ್ಠರಾಗಿದ್ದರೂ ಕರ್ನಾಟಕದ ಅತ್ಯಂತ ಹಿರಿಯ ನಾಯಕ ನಿಮ್ಮ ತಂದೆಯವರಿಗೆ ಮುಖ್ಯಮಂತ್ರಿ ಸ್ಥಾನ ಇಲ್ಲ. ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರು ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತಾ ಮೈಮರೆಯಬೇಡಿ, ಸಮಾಧಾನವೂ ಪಟ್ಟುಕೊಳ್ಳಬೇಡಿ’ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.

‘ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ನಾನು ಎಐಸಿಸಿ ಅಧ್ಯಕ್ಷ ಆಗುವುದಿಲ್ಲ ಎಂದು ನಕಲಿ ಗಾಂಧಿ ಕುಟುಂಬಕ್ಕೆ ಸೆಡ್ಡು ಹೊಡೆದಿದ್ದಕ್ಕೆ ಅನಿವಾರ್ಯವಾಗಿ ನಿಮ್ಮ ತಂದೆಯವರನ್ನು ನಾಮಕಾವಸ್ತೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಒಲ್ಲದ ಮನಸ್ಸಿನಿಂದ ತಂದು ಕೂರಿಸಿದ್ದಾರೆ’ ಎಂದು ಆರ್.ಅಶೋಕ್ ಟೀಕಿಸಿದ್ದಾರೆ.

‘ಒಂದು ನೆನಪಿಟ್ಟುಕೊಳ್ಳಿ. ಏನೇ ಮಾಡಿದರೂ ನೀವು ಮತ್ತು ನಿಮ್ಮ ಕುಟುಂಬ, ನಕಲಿ ಗಾಂಧಿ ಕುಟುಂಬಕ್ಕಿಂತ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗಿಂತ ಕೆಳಗೇ ಇದ್ದೀರಿ, ಮುಂದೆಯೂ ಇರುತ್ತೀರಿ. ಒಂದು ವೇಳೆ ಕಾಂಗ್ರೆಸ್ ಪಕ್ಷ ಉಳಿದರೆ, ಬಹುಶಃ ಭವಿಷ್ಯದಲ್ಲೂ ತಾವು ಪ್ರಿಯಾಂಕಾ ಗಾಂಧಿ ಅವರ ಮಕ್ಕಳಿಗೆ ಸಲಾಮು ಹೊಡೆದುಕೊಂಡು ಜೀವನ ಸಾಗಿಸಬೇಕಾಗಬಹುದು’ ಎಂದು ಆರ್.ಅಶೋಕ್ ಕುಟುಕಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News