×
Ad

‘ಪಿಎಸ್ಐ ಮರುಪರೀಕ್ಷೆ’ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಸಬ್‍ ಇನ್‍ಸ್ಪೆಕ್ಟರ್ ಸಿಸಿಬಿ ವಶಕ್ಕೆ

Update: 2024-01-20 18:07 IST

ಬೆಂಗಳೂರು: ಇದೇ ತಿಂಗಳ 23ರಂದು ನಡೆಯಲಿರುವ 545 ಮಂದಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಪಿಎಸ್ಐ) ಹುದ್ದೆಗಳ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪರೀಕ್ಷೆಗೆ ಸಂಬಂಧಪಟ್ಟಂತೆ ಗುಪ್ತದಳ ವಿಭಾಗದ ಸಬ್ ಇನ್‍ಸ್ಪೆಕ್ಟರ್ ಆಗಿರುವ ಲಿಂಗಯ್ಯ ಎಂಬುವರು ಪ್ರಶ್ನೆ ಪತ್ರಿಕೆ ನೀಡುವುದಾಗಿ ಪರೀಕ್ಷಾರ್ಥಿಗಳಿಗೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಆಡಿಯೋ ದಾಖಲೆಯಡಿ ಪರೀಕ್ಷಾರ್ಥಿಗಳು ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ದೂರನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಿದ್ದು, ಸಿಸಿಬಿ ಪೊಲೀಸರು ಸಬ್‍ಇನ್‍ಸ್ಪೆಕ್ಟರ್ ಲಿಂಗಯ್ಯ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ 1 ಲಕ್ಷ 60 ಸಾವಿರ ಅಭ್ಯರ್ಥಿಗಳು ಸಿಟಿಐ ಪರೀಕ್ಷೆ ಬರೆಯಲಿದ್ದಾರೆ. ಲಿಂಗಯ್ಯ ಎಂಬ ಪಿಎಸ್ಐ ಮಾತನಾಡಿದ ಆಡಿಯೋ ಲಭ್ಯವಾಗಿದೆ. ‘ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೇವೆ, ಪೋಸ್ಟಿಂಗ್ ಕೊಡಿಸುತ್ತೇವೆ’ ಎಂಬುದಾಗಿ ಆಡಿಯೋದಲ್ಲಿ ಮಾತನಾಡಿದ್ದಾರೆ. ಜ.21ರ ಸಿಟಿಐ, ಹಾಗೂ ಜ.23ರಂದು ನಡೆಯುವ ಪಿಎಸ್ಐ ಪರೀಕ್ಷೆ ಸೇರಿ ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸಿದ್ದಾರೆ.

ಒಂದು ಹುದ್ದೆಗೆ 80 ಲಕ್ಷ ರೂ.ಬೇಡಿಕೆ ಇಡುತ್ತಿದ್ದಾರೆ. ಆಡಿಯೋದಲ್ಲಿ ಪವನ್ ಮತ್ತು ರಜತ್ ಎಂಬುವರ ಹೆಸರು ಉಲ್ಲೇಖಿಸಿದ್ದಾರೆ. ಆಡಿಯೋದಲ್ಲಿ ರಾಜಕಾರಣಿಗಳ ಹೆಸರು ಬಳಕೆ ಮಾಡಲಾಗಿದೆ. ಇದೆಲ್ಲದರ ಬಗ್ಗೆ ತನಿಖೆ ನಡೆಯಬೇಕು, ಹಾಗೂ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕಾಂತಕುಮಾರ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News