×
Ad

ಮೇ 15ರಂದು ಪಕ್ಷಾತೀತವಾಗಿ ತಿರಂಗಾ ಯಾತ್ರೆ : ಆರ್.ಅಶೋಕ್

Update: 2025-05-13 21:51 IST

ಆರ್.ಅಶೋಕ್

ಬೆಂಗಳೂರ : ‘ರಾಷ್ಟ್ರ ರಕ್ಷಣೆಗಾಗಿ ನಾಗರಿಕರು’ ಅಡಿಯಲ್ಲಿ ಭಾರತದ ಸೇನೆಯೊಂದಿಗೆ ನಾವಿದ್ದೇವೆ ಎನ್ನುವ ಸಂದೇಶ ಸಾರುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಮೇ 15ರ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆಯನ್ನು ಕೈಗೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಮಂಗಳವಾರ ನಗರದ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಐಕ್ಯತೆ ಪ್ರದರ್ಶನಕ್ಕಾಗಿ ತಿರಂಗಾ ಯಾತ್ರೆ ನಡೆಯುತ್ತಿದೆ. ದೇಶದ ಸೈನಿಕರನ್ನು ಬೆಂಬಲಿಸಿ ಸೇನಾ ಪಡೆಯೊಂದಿಗೆ ನಾವು ಇದ್ದೇವೆ ಎಂಬ ಬದ್ಧತೆಯೊಂದಿಗೆ ಮೇ 15ರಂದು ಬೆಂಗಳೂರಿನ ಮಲ್ಲೇಶ್ವರದ ಸಿರೂರು ಪಾರ್ಕ್‍ನಿಂದ 18ನೇ ಅಡ್ಡರಸ್ತೆವರೆಗೂ ತಿರಂಗಾ ಯಾತ್ರೆ ನಡೆಯಲಿದೆ. ನಾಗರಿಕರು ಯಾವುದೇ ರಾಜಕೀಯ ಇಲ್ಲದೆ ರಾಷ್ಟ್ರ ರಕ್ಷಣೆಗಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಮೇ 16 ಮತ್ತು 17ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಮೇ 18ರಿಂದ 23ರ ವರೆಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಿರಂಗ ಯಾತ್ರೆ ನಡೆಯಲಿದೆ. ಇದು ಪಕ್ಷಾತೀತ ಯಾತ್ರೆಯಾಗಿದ್ದು, ಎಲ್ಲ ರಾಜಕೀಯ ಪಕ್ಷಗಳು ಇದರಲ್ಲಿ ಪಾಲ್ಗೊಂಡು ದೇಶದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸೋಣ ಎಂದು ಆರ್.ಅಶೋಕ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್, ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ವಕ್ತಾರ ಪ್ರಕಾಶ್ ಶೇಷರಾಘವಾಚಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಉಪಸ್ಥಿತರಿದ್ದರು.

ಅಮೆರಿಕದ ಮಾತು ಕೇಳಿ ಯುದ್ಧ ನಿಲ್ಲಿಸಿಲ್ಲ: ‘ಯುದ್ಧ ನಿಲ್ಲಿಸಿದ ಲಾಭವನ್ನು ಯಾರೋ ತೆಗೆದುಕೊಳ್ಳಲಿಕ್ಕೆ ಏನೇನೋ ಮಾತನಾಡುತ್ತಾರೆ. ಸಚಿವ ಕೃಷ್ಣಬೈರೇಗೌಡರು ಯುದ್ಧ ಮುಂದುವರೆಸಬಹುದಿತ್ತು ಎಂದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಯುದ್ಧ ಬೇಡ ಎಂದಿದ್ದರು. ಕದನ ವಿರಾಮದ ಬಗ್ಗೆ ಯಾರೋ ನಾಲ್ಕು ಜನ ತೀರ್ಮಾನ ಮಾಡುವುದಲ್ಲ. ಇದು ಸೈನಿಕರು ತೆಗೆದುಕೊಂಡಿರುವ ತೀರ್ಮಾನ. ಪ್ರಧಾನಿ ಮೋದಿಯವರು ಸೈನಿಕರ ಅಭಿಪ್ರಾಯ ಪಡೆದೇ ಕದನ ವಿರಾಮ ಘೋಷಿಸಿದ್ದಾರೆ. ಅಮೆರಿಕದ ಮಾತನ್ನು ಕೇಳಿ ಯಾರೂ ಯುದ್ಧ ನಿಲ್ಲಿಸಿಲ್ಲ. ಇಷ್ಟು ಸಾಮಾನ್ಯ ಜ್ಞಾನ ಕಾಂಗ್ರೆಸ್‍ನವರಿಗೆ ಇದ್ದರೆ ಸಾಕು’ ಎಂದು ಆರ್.ಅಶೋಕ್ ತಿಳಿಸಿದರು.

ಕಾಂಗ್ರೆಸ್ ಒಡಕು ಮಾತು ನಿಲ್ಲಿಸಲಿ: ಪಹಲ್ಗಾಮ್ ಘಟನೆಗೆ ನಮ್ಮ ಸೈನಿಕರು ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ಕೊಟ್ಟಿದ್ದಾರೆ. ಕಾಂಗ್ರೆಸ್‍ನವರು ದೇಶದ ವಿಚಾರದಲ್ಲಿ ದ್ವಂದ್ವ ನೀತಿ ಪ್ರದರ್ಶನ ಮಾಡುವುದು ಬೇಡ. ಯುದ್ಧ ಆರಂಭಕ್ಕೂ ಮುನ್ನ ಯುದ್ಧದ ಅವಶ್ಯಕತೆ ಇದೆ ಎಂದಿದ್ದರು. ಯುದ್ಧ ಆರಂಭವಾದ ಮೇಲೆ ಶಾಂತಿ ಎಂದರು. ಯುದ್ಧ ನಿಲ್ಲಿಸಿದಾಗ ಯುದ್ಧ ಮಾಡಬೇಕಿತ್ತು ಎನ್ನುತ್ತಿದ್ದಾರೆ. ದೇಶವು ಒಗ್ಗಟ್ಟಿನಲ್ಲಿರುವ ಸಂದರ್ಭದಲ್ಲಿ ಕಾಂಗ್ರೆಸ್ಸಿನವರು ಮೊದಲು ಒಡಕು ಮಾತುಗಳನ್ನು ನಿಲ್ಲಿಸಬೇಕು. ಈ ಸಂದರ್ಭದಲ್ಲಿ ನಾವೆಲ್ಲರೂ ಸೈನಿಕರ ಪರ ನಿಲ್ಲೋಣ. ರಾಜಕೀಯ ಮಾಡುವುದು ಬೇಡ ಎಂದು ಆರ್.ಅಶೋಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News