×
Ad

ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ | ತಕ್ಷಣ 3 ಸಾವಿರ ಕೋಟಿ ರೂ. ಪರಿಹಾರ ಘೋಷಿಸಲಿ : ಆರ್.ಅಶೋಕ್ ಆಗ್ರಹ

Update: 2025-09-29 18:34 IST

ಬೆಂಗಳೂರು, ಸೆ. 29 : ‘ಬೀದರ್, ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ, ಬೆಳೆ ನಷ್ಟದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ 3 ಸಾವಿರ ಕೋಟಿ ರೂ.ಪ್ರವಾಹ ಪರಿಹಾರವನ್ನು ಪ್ರಕಟಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು-ನೋವು ಉಂಟಾಗಿದೆ. ಈವರೆಗೆ ಯಾವುದೇ ಸಚಿವರು ಕ್ರಮ ವಹಿಸಿಲ್ಲ. ಬಿಜೆಪಿ ಅವಧಿಯಲ್ಲಿ ಡಬಲ್ ಪರಿಹಾರ ನೀಡಲಾಗಿತ್ತು. ಸರಕಾರದ ಬಳಿ ಹಣವಿದ್ದರೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣವಿಲ್ಲದೆ ಸಚಿವರು ಹಾಗೂ ಸಿಎಂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡುತ್ತದೆ. ಬಿಜೆಪಿ ಅವಧಿಯಲ್ಲಿ 30 ದಿನಕ್ಕಾಗುವಷ್ಟು ದಿನಸಿ ನೀಡಲಾಗಿತ್ತು. ಈ ಸರಕಾರ ಅರ್ಧ ಕೆಜೆ ಅಕ್ಕಿಯನ್ನೂ ಕೊಟ್ಟಿಲ್ಲ. ಬಿಜೆಪಿ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ನಾನು ಪ್ರವಾಸ ಮಾಡಿ ಸರಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಕಮಿಷನ್ ಸರಕಾರ: ಕಾಂಗ್ರೆಸ್ ಸರಕಾರ ಶೇ.80ರಷ್ಟು ಪರ್ಸೆಂಟ್‌ ಕಮಿಶನ್ ಪಡೆಯುತ್ತಿರುವುದು ಸಾಬೀತಾಗಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಲಿ. ಇದೀಗ ಗುತ್ತಿಗೆದಾರರ ಸಂಘದವರು, ಈ ಸರಕಾರ ದುಪ್ಪಟ್ಟು ಕಮಿಶನ್ ಪಡೆಯುತ್ತಿದೆ ಎಂದು ಹೇಳಿ ಸಿಎಂಗೆ ಪತ್ರ ಬರೆದಿದ್ದಾರೆ ಎಂದು ಅವರು ಟೀಕಿಸಿದರು.

ಸಚಿವರು ಲಂಚ ಪಡೆದಿಲ್ಲ ಎಂದಾದರೆ ಸ್ಪಷ್ಟನೆ ನೀಡಲಿ. ಇಲ್ಲವೆಂದರೆ ಎಲ್ಲರೂ ಲಂಚ ಪಡೆದಿದ್ದಾರೆ ಎಂದು ತಿಳಿಯಬೇಕಾಗುತ್ತದೆ. ನ್ಯಾ.ನಾಗಮೋಹನದಾಸ್ ಸಮಿತಿಯನ್ನು ಸರಕಾರ ರದ್ದು ಮಾಡಿದೆ. ಭ್ರಷ್ಟಾಚಾರ ಬಯಲಾಗುವುದೆಂಬ ಕಾರಣಕ್ಕೆ ಈ ಕ್ರಮ ವಹಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸಿದ್ದರು. ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಜಾತಿ ಸಮೀಕ್ಷೆಯಲ್ಲಿ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ತಮಗೆ ಬೇಕಾದ ಜಾತಿಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಸಮೀಕ್ಷೆಗೆ ಪೂರ್ವ ತಯಾರಿ ಮಾಡಿಲ್ಲ. ಕೇವಲ 15ದಿನಗಳಲ್ಲಿ ಮುಗಿಸಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಸಾಕಷ್ಟು ಸಮಯ ಇಟ್ಟುಕೊಂಡು ಸಮೀಕ್ಷೆ ಮಾಡಬೇಕು. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಮಾಡುತ್ತಿರುವ ಸಮೀಕ್ಷೆ ಎಂದು ಅವರು ಟೀಕಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News