ಸುಧಾಮೂರ್ತಿ ಕುಟುಂಬ ನೀಡಿರುವ ಮಾಹಿತಿ ಹೇಗೆ ಬಹಿರಂಗವಾಯಿತು?: ಆರ್.ಅಶೋಕ್
ಬೆಂಗಳೂರು, ಅ. 18: ‘ಸಿಎಂ ಸಿದ್ದರಾಮಯ್ಯನವರೇ, ಸಮೀಕ್ಷೆಯಲ್ಲಿ ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆಯನ್ನು ಕಾಪಾಡುತ್ತೇವೆಂದು ನಿಮ್ಮ ಸರಕಾರ ಕೋರ್ಟ್ ಮುಂದೆ ಒಪ್ಪಿಕೊಂಡಿದೆ. ಆದರೂ, ಸುಧಾಮೂರ್ತಿ ಕುಟುಂಬದವರು ನೀಡಿರುವ ಮಾಹಿತಿ ಹೇಗೆ ಬಹಿರಂಗವಾಯಿತು?. ಮಾಹಿತಿ ಸೋರಿಕೆ ಮಾಡಿದ ಸರಕಾರಿ ಅಧಿಕಾರಿ, ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುತ್ತೀರಾ?’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ, ಸಮೀಕ್ಷೆಯಲ್ಲಿ ಸಾರ್ವಜನಿಕರು ನೀಡುವ ಮಾಹಿತಿಯ ಗೌಪ್ಯತೆ ಕಾಪಾಡಬೇಕು ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದ್ದರೂ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ವರ್ತಿಸುವ ಮೂಲಕ ಕಾಂಗ್ರೆಸ್ ಸರಕಾರ ನ್ಯಾಯಾಂಗ ನಿಂದನೆ ಎಸಗುತ್ತಿದೆ ಎಂದು ದೂರಿದ್ದಾರೆ.
‘ಬೆಂಗಳೂರಿನಲ್ಲಿ ಹದಗೆಟ್ಟಿರುವ ರಸ್ತೆಗಳ ಬಗ್ಗೆ ಉದ್ಯಮಿಗಳು ದನಿ ಎತ್ತಿದಾಗ, ‘ನಿಮ್ಮ ಸಿಎಸ್‍ಆರ್ ನಿಧಿಯಲ್ಲಿ ನೀವೇ ರಸ್ತೆಗುಂಡಿ ಮುಚ್ಚಿ, ನಿಮ್ಮ ಸಿಎಸ್‍ಆರ್ ನಿಧಿಯ ಲೆಕ್ಕಕೊಡಿ’ ಎಂದು ಬೆದರಿಸಿ ಅವಮಾನ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಒಂದು ಹೆಜ್ಜೆ ಮುಂದೆ ಹೋಗಿ ‘ಇನ್ಫೋಸಿಸ್‍ನವರು ಬೃಹಸ್ಪತಿಗಳಾ?, ಜಾತಿಗಣತಿ ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು’ ಎಂದು ನಿಂದಿಸುವ ಮೂಲಕ ಮತ್ತೊಮ್ಮೆ ದರ್ಪ, ದುರಹಂಕಾರ ಮೆರೆದಿದ್ದಾರೆ’ ಎಂದು ಟೀಕಿಸಿದ್ದಾರೆ.
‘ಹೈಕೋರ್ಟ್ ಈ ಸಮೀಕ್ಷೆ ಕಡ್ಡಾಯವಲ್ಲ ಎಂದು ಸ್ಪಷ್ಟವಾಗಿ ಹೇಳಿರುವಾಗ ಈ ಸಮೀಕ್ಷೆಯಲ್ಲಿ ಭಾಗವಹಿಸದವರು ದೇಶದ್ರೋಹಿಗಳು ಹೇಗಾಗುತ್ತಾರೆ, ಬಿ.ಕೆ.ಹರಿಪ್ರಸಾದ್ ಅವರೇ?. ನಮ್ಮ ದೇಶದ ಉದ್ಯಮಿಗಳನ್ನ ನಿಂದಿಸುವ, ಲಕ್ಷಾಂತರ ಜನಕ್ಕೆ ಉದ್ಯೋಗ ಕೊಟ್ಟು ದೇಶದ ಆರ್ಥಿಕತೆಗೆ ಶಕ್ತಿ ತುಂಬಿರುವ ಉದ್ಯಮಿಗಳ ಬಗ್ಗೆ ನಾಲಿಗೆ ಹರಿಬಿಡುವ ಕಾಂಗ್ರೆಸ್ ನಾಯಕರಿಗೆ ನಿಜಕ್ಕೂ ನಾಚಿಕೆಯಾಗಬೇಕು’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.