×
Ad

ರೈತರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರ ಇರಲಿ: ಡಿಸಿಎಂ ಡಿ.ಕೆ. ಶಿವಕುಮಾರ್ ಗೆ ಆರ್. ಅಶೋಕ್ ಎಚ್ಚರಿಕೆ

Update: 2025-09-05 20:41 IST

ಬೆಂಗಳೂರು: ‘ರೈತರ ಬಗ್ಗೆ ಮಾತನಾಡುವಾಗ ಸ್ವಲ್ಪ ಎಚ್ಚರ ಇರಲಿ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎಚ್ಚರಿಸಿದ್ದಾರೆ.

ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಈ ಹಿಂದೆ ರೈತರ ಸರಣಿ ಆತ್ಮಹತ್ಯೆ ವಿಷಯ ಬಂದಾಗ ‘ಎಲ್ಲಿದೆ ಆತ್ಮಹತ್ಯೆ? ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲಾ ರೈತರು ಅನ್ನೋಕಾಗತ್ತಾ? ಸುಳ್ಳು ಅದೆಲ್ಲಾ’ ಎಂದು ರೈತರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಿರಿ. ಇದೀಗ ‘ರೈತರು ಧಿಕ್ಕಾರ ಕೂಗೋದು ಬಿಟ್ಟು ಬೇರೇನೂ ಮಾಡೋಕ್ಕಾಗಲ್ಲ’ ಎಂದು ರೈತರ ಅಸಹಾಯಕರು ಅನ್ನುವ ರೀತಿ ಹೀಯಾಳಿಸಿ ಮಾತನಾಡಿದ್ದೀರಿ’ ಎಂದು ಉಲ್ಲೇಖಿಸಿದ್ದಾರೆ.

‘ಇಡೀ ದೇಶಕ್ಕೆ ಅನ್ನ ನೀಡುವ ರೈತ ಜೀವನವಿಡೀ ತಾನು ಬದುಕುವುದು, ದುಡಿಯುವುದು ಎಲ್ಲವೂ ಇನ್ನೊಬ್ಬರಿಗಾಗಿಯೇ ಹೊರತು ತನ್ನ ಸ್ವಂತಕ್ಕಾಗಿ ಅಲ್ಲ. ಕೈಗಾರಿಕೆಗಳಿಗೆ, ರೈಲು, ರಸ್ತೆ, ವಿಮಾನ ನಿಲ್ದಾಣಕ್ಕೆ ಈ ಹಿಂದೆಯೂ ರೈತರ ಬಳಿ ಜಮೀನು ಪಡೆಯಲಾಗಿದೆ. ಎಚ್‍ಎಂಟಿ ಕಾರ್ಖಾನೆ ಬಂದಾಗ ಸ್ವತಃ ನಮ್ಮ ಕುಟುಂಬ ಜಮೀನು ನೀಡಿತ್ತು. ಆದರೆ, ತಮ್ಮ ಜೀವನದ ಆಧಾರ ಸ್ತಂಭವಾಗಿರುವ ಜಮೀನನ್ನು ಕಳೆದುಕೊಳ್ಳುತ್ತಿರುವ ರೈತರ ಬಳಿ ಹೇಗೆ ಮಾತನಾಡಬೇಕು, ಯಾವ ರೀತಿ ಸಂವೇದನೆಯಿಂದ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಸೌಜನ್ಯವೂ ಇಲ್ಲದ ತಮ್ಮಂತಹವರು ಮುಂದೊಂದು ದಿನ ಸಿಎಂ ಆಗುವ ಕನಸು ಕಾಣುತ್ತಿರುವುದು ನಮ್ಮ ನಾಡಿನ ದುರಂತ’ ಎಂದು ಅವರು ಲೇವಡಿ ಮಾಡಿದ್ದಾರೆ.

‘ರೈತರ ಕಷ್ಟ, ಕೃಷಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗೊತ್ತಿರುವ ನಿಜವಾದ ಒಕ್ಕಲಿಗ ಅನ್ನದಾತರ ಬಗ್ಗೆ ಈ ರೀತಿಯ ದರ್ಪದ ಮಾತುಗಳನ್ನು ಎಂದಿಗೂ ಆಡುವುದಿಲ್ಲ. ಒಕ್ಕಲಿಕೆಯನ್ನು, ಮಣ್ಣಿನ ಮಕ್ಕಳನ್ನು ಅಪಮಾನ ಮಾಡುತ್ತಿರುವ ತಮ್ಮ ಈ ದುರ್ನಡತೆಯ ಪರಿಣಾಮ ಮುಂದೆ ಗೊತ್ತಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News