‘ಬಿಹಾರ ಫಲಿತಾಂಶ’ ಬಂದ ಬಳಿಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡುವುದು ಖಂಡಿತ: ಆರ್. ಅಶೋಕ್
ಆರ್. ಅಶೋಕ್ (File Photo: X)
ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಆದುದರಿಂದ, ಫಲಿತಾಂಶ ಬಂದ ಬಳಿಕ ರಾಹುಲ್ ಗಾಂಧಿ ಮತಗಳ್ಳತನ ಆರೋಪ ಮಾಡುವುದು ಖಂಡಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಹಾರದ ಚುನಾವಣೆ ಪ್ರತಿಷ್ಠಿತ ಚುನಾವಣೆಯಾಗಿದೆ. ಬಿಹಾರದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದ್ದರೂ ಈ ಬಾರಿ ಉತ್ತಮವಾಗಿ ಮತದಾನ ನಡೆದಿದೆ. ಅಮಿತ್ ಶಾ ಗೃಹ ಸಚಿವರಾದ ಬಳಿಕ ನಕ್ಸಲ್ ಚಟುವಟಿಕೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿಸಿದರು.
12ಕ್ಕೂ ಹೆಚ್ಚು ಸಂಸ್ಥೆಗಳು ಸಮೀಕ್ಷೆ ಮಾಡಿದ್ದು, ಎನ್‍ಡಿಎ ಅಧಿಕಾರಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಮತದಾರರ ಬೆಂಬಲ ಇಲ್ಲ ಎಂದು ಸಮೀಕ್ಷೆಗಳಲ್ಲಿ ಹೇಳಲಾಗಿದೆ ಎಂದು ಅಶೋಕ್ ಹೇಳಿದರು.
ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಸರಣಿಯಾಗಿ ಸೋಲುತ್ತಿದೆ. ಲೋಕಸಭೆ, ವಿಧಾನಸಭಾ ಚುನಾವಣೆಗಳಲ್ಲಿ ರಾಹುಲ್ ಗಾಂಧಿ ‘ಐರನ್ ಲೆಗ್’ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶ ಬಂದ ನಂತರ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ. ಒಂದು ಕಡೆ ಲೋಕಸಭೆಯಲ್ಲೂ ಅವರು ಕೆಲಸ ಮಾಡುತ್ತಿಲ್ಲ, ಮತ್ತೊಂದು ಕಡೆ ಪಕ್ಷಕ್ಕಾಗಿಯೂ ಕೆಲಸ ಮಾಡುತ್ತಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದರು.
ದಿಲ್ಲಿಯಲ್ಲಾದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಉಗ್ರರಿಗೆ ಮೊಬೈಲ್ ಕೊಟ್ಟಿದ್ದು ಯಾರು ಎಂದು ತನಿಖೆ ಮಾಡಬೇಕಿದೆ ಅಥವಾ ಮೊಬೈಲ್ ಬಳಸಿ ಏನು ಮಾಡಿದ್ದಾರೆ ಎಂದು ತನಿಖೆ ಮಾಡಬೇಕಿತ್ತು. ಆದರೆ ಈ ವೀಡಿಯೊ ಹೊರಗೆ ಬಂದಿದ್ದು ಹೇಗೆ ಎಂದು ತನಿಖೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದಂತೆಯೆ ರಾಜ್ಯ ಸರಕಾರ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ದಿಲ್ಲಿಯನ್ನು ನೋಡಬೇಕಿಲ್ಲ. ಮಲ್ಲಿಕಾರ್ಜುನ ಖರ್ಗೆ ಗೃಹ ಸಚಿವರಾಗಿದ್ದಾಗ ನಮ್ಮ ರಾಜ್ಯದಲ್ಲೆ ದಲಿತರನ್ನು ಸುಟ್ಟು ಹಾಕಲಾಗಿತ್ತು. ಆ ಪ್ರಕರಣದಲ್ಲಿ ಖರ್ಗೆಯವರ ವಿಫಲತೆಯನ್ನು ಇವರು ಮೊದಲು ನೋಡಲಿ. ಅಮಿತ್ ಶಾ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇಲ್ಲ ಎಂದು ಅಶೋಕ್ ಹೇಳಿದರು.
ಸರಕಾರ ಈಗ ಪಾಪರ್ ಆಗಿದೆ. ನೌಕರರಿಗೆ, ಸಿಬ್ಬಂದಿಗೆ ಸಂಬಳ ಕೊಡಲು ಆಗುತ್ತಿಲ್ಲ. ರಾಜ್ಯಾದ್ಯಂತ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿಸಲು ರೈತರು ಬೇಡಿಕೆ ಇಟ್ಟಿದ್ದಾರೆ. ಆದರೆ ರೈತ ವಿರೋಧಿ ಸರಕಾರ ಒಂದೆ ಒಂದು ಖರೀದಿ ಕೇಂದ್ರ ತೆರೆದಿಲ್ಲ. ಕಾಲಾಹರಣ ಮಾಡದೆ ಕೂಡಲೆ ಖರೀದಿ ಆರಂಭಿಸಬೇಕು, ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಈರುಳ್ಳಿ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುತ್ತಿರುವ ದರ ನೋಡಿದರೆ ಕಳೆ ಕೀಳಿಸಿದ ಕೂಲಿಯ ಹಣವೂ ಗಿಟ್ಟುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನೆರವಿಗೆ ಧಾವಿಸಿ ಈರುಳ್ಳಿ ಖರೀದಿಸಲು ಕ್ರಮ ಕೈಗೊಳ್ಳಬೇಕಿದ್ದ ಸರಕಾರ ಮೀನಾ ಮೇಷ ಎಣಿಸುತ್ತಿದೆ. ಮಾತಿಗೊಮ್ಮೆ ತಮ್ಮದು ರೈತ ಪರ ಸರಕಾರ ಎಂದು ಸಿಎಂ ಸಿದ್ದರಾಮಯ್ಯ ಬೆನ್ನು ತಟ್ಟಿಕೊಳ್ಳುತ್ತಾರೆ, ಇದೇನಾ ರೈತರ ಪರವಾದ ಕಾಳಜಿ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.