ದೇಶದ ಸಾಲ ಏರಿಸಿದ್ದೇ ಮೋದಿ ಸಾಧನೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ಜು 21: ‘ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಮೋದಿ ಪ್ರಧಾನಿ ಆಗುವವರೆಗೂ 53 ಲಕ್ಷ ಕೋಟಿ ರೂ.ಇದ್ದ ದೇಶದ ಸಾಲ, ಈಗ 170ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ದೇಶದ ಸಾಲ ಏರಿಸಿದ್ದೇ ಮೋದಿಯವರ ಸಾಧನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ವಿಧಾನ ಪರಿಷತ್‍ನಲ್ಲಿ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಅವರು, ಈಗ ದೇಶದ ಸಾಲ 170 ಲಕ್ಷ ಕೋಟಿ ರೂ.ಗೆ ತಲುಪಿದೆ. ಪ್ರಧಾನಿ ಮೋದಿ ಒಬ್ಬರ ಅವಧಿಯಲ್ಲಿ 118 ಲಕ್ಷ ಕೋಟಿ ರೂ.ಸಾಲ ಮಾಡಲಾಗಿದೆ. ಮೋದಿ ದೇಶದ ಪ್ರಧಾನಿ ಆಗುವ ಮುನ್ನ ದೇಶದ ಸಾಲ 53 ಲಕ್ಷ ಕೋಟಿ ರೂ. ಮಾತ್ರ ಇತ್ತು ಎಂದರು.
ಶ್ರಮಿಕರ, ಬಡವರ ಹಣ ಕಿತ್ತು ಶ್ರೀಮಂತ ಕಾರ್ಪೋರೇಟ್‍ಗಳಿಗೆ ಕೊಡುವುದು ಬಿಜೆಪಿಯ ಆರ್ಥಿಕತೆಯಾಗಿದೆ. ದೇಶವನ್ನು ಸಾಲದ ಸುಳಿಗೆ ಸಿಲುಕಿಸಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡ ಜನರ ಬದುಕನ್ನು ದುಸ್ತರ ಮಾಡಿದ ಕೀರ್ತಿ ಪ್ರಧಾನಿ ಮೋದಿ ಅವರದ್ದಾಗಿದ್ದು, ಅವರೊಬ್ಬ ದೊಡ್ಡ ಸಾಲಗಾರ ಎಂದು ಹೇಳಿದರು.
ಶ್ರೀಮಂತ ಕಾರ್ಪೋರೇಟ್‍ಗಳ 12 ಲಕ್ಷ ಕೋಟಿ ರೂ.ಸಾಲ ಮನ್ನಾ ಮಾಡಿದ ಮೋದಿ, ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುತ್ತಾರೆ. ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್-ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಸಿದರೆ, ಹಾಲು, ಮೊಸರು, ಮಜ್ಜಿಗೆ, ಮಂಡಕ್ಕಿ ಮೇಲೂ ಜಿಎಸ್‍ಟಿ ಹಾಕಿದರೆ ಬಡವರು, ಮಧ್ಯಮ ವರ್ಗದವರ ಗತಿ ಏನು ಎಂದು ಅವರು ಪ್ರಶ್ನಿಸಿದರು.
ಮಹಾತ್ಮಗಾಂಧಿ ಜೀವನ ಸಂದೇಶವೇ ಸತ್ಯ-ಅಹಿಂಸೆ ಆಗಿತ್ತು. ಸದಾ ಸುಳ್ಳು ಹೇಳುವ ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಕುಳಿತಿದ್ದಾರೆ. ಅಂಬೇಡ್ಕರ್ ಆಶಯದಂತೆ ಅಸಮಾನತೆ, ತಾರತಮ್ಯವನ್ನು ಅಳಿಸುವ ದೃಷ್ಟಿಯಿಂದ ಬಜೆಟ್‍ನಲ್ಲಿ ಸರ್ವರಿಗೂ ಸಮಾನ ಅವಕಾಶ ಸಿಗುವ ಆಶಯದ ಕಾರ್ಯಕ್ರಮಗಳಿಗೆ ಮಹತ್ವ ನೀಡಿದ್ದೇನೆ ಎಂದು ಅವರು ಹೇಳಿದರು.
ಬಸವಣ್ಣನವರ ದಾಸೋಹ ಮತ್ತು ಕಾಯಕ ಸಂಸ್ಕøತಿಯ ಆಶಯ ನಮ್ಮ ಆಯವ್ಯಯದಲ್ಲಿದೆ. ಬಿಜೆಪಿಯವರು ಬಸವ ವಿರೋಧಿಗಳಾಗಿದ್ದ, ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ. ಅವರು ಮಣಿಪುರವನ್ನು ಬಿಡುವುದಿಲ್ಲ. ಕರ್ನಾಟಕವನ್ನೂ ಬಿಡುವುದಿಲ್ಲ, ಬೆಂಕಿ ಹಚ್ಚುತ್ತಾರೆ ಎಂದರು.
‘ಕೇಂದ್ರ ಸರಕಾರವು ರಾಜ್ಯಗಳಿಗೆ ನೀಡುವ ಸಬ್ಸಿಡಿಗಳನ್ನು ಕಡಿತ ಮಾಡಿದೆ. ಯೋಜನೆಯಲ್ಲಿ ಶೇ.80 ರಷ್ಟು ರಾಜ್ಯ ಹಾಗೂ ಶೇ.20ರಷ್ಟು ಕೇಂದ್ರ ಸರಕಾರ ಹಾಕಿ, ಕೇಂದ್ರ ಪುರಸ್ಕೃತ ಯೋಜನೆ ಎನ್ನಲಾಗುತ್ತದೆ. ಈ ವರ್ಷ ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ಕೇಂದ್ರಕ್ಕೆ 4 ಲಕ್ಷ ಕೋಟಿ ರೂ. ಹೋಗುತ್ತಿದ್ದು, ಅದರಲ್ಲಿ ತೆರಿಗೆ ಪಾಲು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸೇರಿ ಕೇವಲ 50,257 ಕೋಟಿ ರೂ. ಬರುತ್ತದೆ’
-ಸಿದ್ದರಾಮಯ್ಯ, ಮುಖ್ಯಮಂತ್ರಿ