×
Ad

ʼನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ವಸೂಲಿʼ; ರಿಕ್ಷಾ ಚಾಲಕರ ವಿರುದ್ಧ ಕ್ರಮವಹಿಸಿ: ರಾಮಲಿಂಗಾರೆಡ್ಡಿ

Update: 2025-06-28 21:04 IST

ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ನಗರದಲ್ಲಿ ಸರಕಾರ ನಿಗದಿ ಮಾಡಿರುವ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುತ್ತಿರುವ ಆಪ್ ಆಧಾರಿತ ಆಟೊ ಅಥವಾ ಬೇರೆ ಮಾದರಿಯ ಆಟೊಗಳಾಗಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದು ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಪ್ರಯಾಣಿಕರಿಂದ ನಿಗದಿ ದರಕ್ಕಿಂತ ಹೆಚ್ಚಿನ ದರ ಬೇಡಿಕೆ, ಹೆಚ್ಚಿನ ದರ ನೀಡದಿದ್ದಲ್ಲಿ ಪ್ರಯಾಣವನ್ನು ರದ್ದುಗೊಳಿಸುವುದು ಹಾಗೂ ಅತೀ ಹೆಚ್ಚಿನ ದರ ವಸೂಲು ಮಾಡುತ್ತಿರುವ ಪ್ರಕರಣಗಳ ಬಗ್ಗೆ, ದೂರು ಬಂದಲ್ಲಿ ತ್ವರಿತಗತಿಯಲ್ಲಿ ಕ್ರಮಕೈಗೊಂಡು ಅಂತಹ ಆಟೊಗಳ ಪರ್ಮಿಟ್ ರದ್ದು ಮಾಡುವುದರ ಜೊತೆಗೆ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

ಜೂ.18ನೇರಂದು ರಾಪಿಡೋ ಆಟೊ ಆಪ್ ಪ್ರತಿ ಕ್ರಿ.ಮೀ 100.89 ರೂ., ಅದೇ ಆಟೋ ಓಲಾ ಆಪ್ ಅವರು 4 ಕಿ.ಮೀ ದೂರದ ಪ್ರಯಾಣಕ್ಕೆ 184.19 ರೂ. ತೆಗೆದುಕೊಂಡಿರುತ್ತಾರೆ. ಸಾರ್ವಜನಿಕರಿಂದ ಈ ರೀತಿಯ ಹಗಲು ದರೋಡೆ ಅಕ್ಷಮ್ಯವಾಗಿದೆ. ಈ ಕುರಿತು ಶೀಘ್ರದಲ್ಲೇ ಕಠಿಣ ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಬಾಡಿಗೆಗೆ ನಿರಾಕರಣೆ, ಅಧಿಕ ಬಾಡಿಗೆಗೆ ಒತ್ತಾಯಿಸಿದ ಆಟೊ ಚಾಲಕರ ವಿರುದ್ಧ ಪ್ರಕರಣಗಳನ್ನು ಸಾರಿಗೆ ಇಲಾಖೆಯು ದಾಖಲಿಸುತ್ತಿದ್ದಾಗಲೂ, ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸಾರ್ವಜನಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೂಡಲೇ ಪರಿಣಾಮಕಾರಿಯಾದ ಕಾರ್ಯ ಯೋಜನೆ ರೂಪಿಸಿ ತಪ್ಪಿತಸ್ಥ ಆಟೊ ಚಾಲಕರು, ಮಾಲಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News