ರಾಮನಗರ: ಕಾರ್ಮಿಕನ ಕಾಲಿಗೆ ಸರಪಳಿ ಬಿಗಿದು ಕೆಲಸ ಮಾಡಿಸುತ್ತಿದ್ದ ಕಾರ್ಖಾನೆ ಮಾಲಕ

Update: 2023-12-27 10:10 GMT

ರಾಮನಗರ, ಡಿ.27: ಮುಂಗಡವಾಗಿ ಹಣ ಸಾಲ ಪಡೆದು ಬಳಿಕ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ಕಾರ್ಮಿಕನೊಬ್ಬನ ಕಾಲಿಗೆ ಸರಪಳಿ ಬಿಗಿದು ಕೆಲಸ ಮಾಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆ ನಗರದ ಮೆಹಬೂಬ ನಗರದಲ್ಲಿರುವ ಎಸ್.ಐ.ಯು. ಸಿಲ್ಕ್ ಎಂಬ ರೇಷ್ಮೆ ಕಾರ್ಖಾನೆಯಲ್ಲಿ ನಡೆದಿದೆ. ದೌರ್ಜನ್ಯಕ್ಕೆ ಒಳಗಾದ ಕಾರ್ಮಿಕನನ್ನು ರಾಮನಗರ ಟೌನ್ ಪೊಲೀಸರು ರಕ್ಷಿಸಿದ್ದಾರೆ.

ಐಜೂರಿನ ವಾಟರ್ ಟ್ಯಾಂಕ್ ವೃತ್ತದ ನಿವಾಸಿ ಮುಹಮ್ಮದ್ ವಸೀಂ (24) ದೌರ್ಜನ್ಯಕ್ಕೆ ಒಳಗಾದ ಕಾರ್ಮಿಕ. ಈ ಸಂಬಂಧ ಎಸ್.ಐ.ಯು. ಸಿಲ್ಕ್ ಕಾರ್ಖಾನೆಯ ಮಾಲಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಜದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.

ವಸೀಂ ಐದು ತಿಂಗಳ ಹಿಂದೆ ಎಸ್.ಐ.ಯು. ಸಿಲ್ಕ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದರು. ಬಳಿಕ ಕಾರ್ಖಾನೆ ಮಾಲಕರಿಂದ ಮುಂಗಡವಾಗಿ 1.50 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಅನಿವಾರ್ಯ ಕಾರಣಗಳಿಂದಾಗಿ ಕಳೆದ ಒಂದು ತಿಂಗಳು ಕೆಲಸಕ್ಕೆ ಗೈರುಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಮತ್ತೆ ಕೆಲಸಕ್ಕೆ ಹಾಜರಾದ ವಸೀಂ ಅವರ ಕಾಲಿಗೆ ಕಾರ್ಖಾನೆ ಮಾಲಕ ಕಬ್ಬಿಣದ ಸರಪಳಿ ಬಿಗಿದಿದ್ದ. ಸಾಲದ ಮೊತ್ತ ತೀರುವವರೆಗೆ ಫ್ಯಾಕ್ಟರಿಯಲ್ಲೇ ಇರಬೇಕೆಂದು ಈ ರೀತಿ ಮಾಡಲಾಗಿದೆ. ಕಾಲಿಗೆ ಸರಪಳಿ ಬಿಗಿದ ಸ್ಥಿತಿಯಲ್ಲಿ ಕಳೆದ ಒಂಭತ್ತು ದಿನಗಳಿಂದ ವಸೀಂ ಜೀತದಾಳಿನಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಹ ಕಾರ್ಮಿಕರು ನೀಡಿದ ಮಾಹಿತಿಯನ್ನು ಆಧರಿಸಿ ರಾಮನಗರ ಟೌನ್ ಠಾಣೆ ಪೊಲೀಸರು ಕಾರ್ಖಾನೆಯ ಮೇಲೆ ದಾಳಿ ನಡೆಸಿ ವಸೀಮ್ ರನ್ನು ರಕ್ಷಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಾರ್ಖಾನೆ ಮಾಲಕ ಸಯ್ಯದ್ ಇಸಾಮ್ ಮತ್ತು ಮೇಲ್ವಿಚಾರಕ ಸಯ್ಯದ್ ಅಮ್ಮದ್ ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News