ವಿಧಾನ ಪರಿಷತ್‌ಗೆ ರಮೇಶ್ ಬಾಬು, ಆರತಿ ಕೃಷ್ಣ, ಕೆ.ಶಿವಕುಮಾರ್, ಜಕ್ಕಪ್ಪನವರ್ ನಾಮನಿರ್ದೇಶನ
ರಮೇಶ್ ಬಾಬು/ಕೆ.ಶಿವಕುಮಾರ್/ಜಕ್ಕಪ್ಪನವರ್/ಆರತಿ ಕೃಷ್ಣ
ಬೆಂಗಳೂರು, ಸೆ.7 : ಹಲವು ದಿನಗಳಿಂದ ಖಾಲಿ ಇದ್ದ ವಿಧಾನ ಪರಿಷತ್ತಿನ ನಾಲ್ಕು ಸದಸ್ಯ ಸ್ಥಾನಗಳಿಗೆ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಆರತಿ ಕೃಷ್ಣ, ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು, ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎಫ್.ಎಚ್.ಜಕ್ಕಪ್ಪನವರ್ ಹಾಗೂ ಹಿರಿಯ ಪತ್ರಕರ್ತ ಮೈಸೂರಿನ ಶಿವಕುಮಾರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ರಾಜ್ಯಪಾಲರು ಭಾರತದ ಸಂವಿಧಾನದ 171(3)(ಇ) ವಿಧಿಯಡಿಯಲ್ಲಿ ಈ ನಾಲ್ವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿದ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ವಾರಗಳ ಹಿಂದೆ ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್, ಕೆ.ಎ.ತಿಪ್ಪೇಸ್ವಾಮಿ, ಸಿ.ಪಿ.ಯೋಗೇಶ್ವರಿಂದ ತೆರವಾದ ಮೇಲ್ಮನೆ ಸ್ಥಾನಕ್ಕೆ ಆರತಿ ಕೃಷ್ಣ, ರಮೇಶ್ ಬಾಬು, ಜಕ್ಕಪ್ಪನವರ್ ಹಾಗೂ ಮೈಸೂರಿನ ಶಿವಕುಮಾರ್ ಅನ್ನು ನಾಮನಿರ್ದೇಶಿಸುವಂತೆ ರಾಜ್ಯಪಾಲರನ್ನು ಕೋರಿದ್ದರು. ಅದರಂತೆ ರಾಜ್ಯಪಾಲರು ನಾಲ್ವರ ಹೆಸರಿಗೆ ಅನುಮೋದನೆ ನೀಡಿದ್ದು, ಈ ಸಂಬಂಧ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ.
ಕಾಂಗ್ರೆಸ್ ಹೊಸ ನಾಲ್ವರು ಅಭ್ಯರ್ಥಿಗಳ ನಾಮನಿರ್ದೇಶನ ಮಾಡುವ ಮೂಲಕ ಒಟ್ಟು 75 ಬಲದ ಮೇಲ್ಮನೆಯಲ್ಲಿ ಕಾಂಗ್ರೆಸ್‍ನ ಸಂಖ್ಯಾಬಲ 33ಕ್ಕೆ ಏರಿಕೆಯಾಗಲಿದೆ. ಸದ್ಯ ಮೇಲ್ಮನೆಯಲ್ಲಿ ಬಿಜೆಪಿ ಬಲ 33 ಇದ್ದು, ಜೆಡಿಎಸ್ 7 ಬಲಾಬಲ ಹೊಂದಿದೆ. ಸಭಾಪತಿ ಬಸವರಾಜ ಹೊರಟ್ಟಿ ಮತ್ತು ಪಕ್ಷೇತರ ಎಂಎಲ್‍ಸಿಯಾದ ಲಖನ್ ಜಾರಕಿಹೊಳಿ ಇದ್ದಾರೆ.
ಕರ್ನಾಟಕದ ಮಾಜಿ ಸಚಿವರೂ ಆಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಬೇಗಾನೆ ರಾಮಯ್ಯ ಅವರ ಪುತ್ರಿಯಾಗಿರುವ ಆರತಿ ಕೃಷ್ಣ ಅವರು ಕಾಂಗ್ರೆಸ್ ಪಕ್ಷದೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಎನ್‍ಆರ್‌ಐ ಸೆಲ್‍ನ ಮೊದಲ ಉಪಾಧ್ಯಕ್ಷ್ಷರಾಗಿದ್ದರು.
ವಾಷಿಂಗ್ಟನ್ ಡಿಸಿಯಲ್ಲಿನ ಭಾರತೀಯ ರಾಯಭಾರ ಕಚೇರಿಯಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿ ಮತ್ತು ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯದ ಇಂಡಿಯಾ ಡೆವಲಪ್‍ಮೆಂಟ್ ಫೌಂಡೇಶನ್‍ನಲ್ಲಿ ಸಲಹೆಗಾರರಾಗಿದ್ದರು. ಜತೆಗೆ, ಸಾಮಾಜಿಕ ಆರ್ಥಿಕ ಅಗತ್ಯಗಳನ್ನು ಪೂರೈಸಲು ಮತ್ತು ಕರ್ನಾಟಕದ ದೂರದ ಹಳ್ಳಿಗಳಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ‘ಕೃಷ್ಣ ಫೌಂಡೇಶನ್' ಎಂಬ ಎನ್‍ಜಿಒ ಅನ್ನು ಪ್ರಾರಂಭಿಸಿ, ಕೆಲಸ ಮಾಡಿದ್ದಾರೆ.
ಆರತಿ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ‘ರಾಜಕೀಯ ವಿಜ್ಞಾನ' ಮತ್ತು ವಾಷಿಂಗ್ಟನ್‍ನ ಜಾರ್ಜ್ ಮೇಸನ್ ವಿಶ್ವವಿದ್ಯಾಲಯದಿಂದ ‘ಅಂತಾರಾಷ್ಟ್ರೀಯ ವಾಣಿಜ್ಯ ಮತ್ತು ಸಾರ್ವಜನಿಕ' ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಅವರಿಗೆ ಸಂದಿದೆ.
ಈ ಹಿಂದೆ ಜೆಡಿಎಸ್‍ನಿಂದ ಪರಿಷತ್ತಿನ ಸದಸ್ಯರಾಗಿದ್ದ ರಮೇಶ್ ಬಾಬು ಅವರು ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಗೊಂಡರು. ಆನಂತರ, ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷರಾಗಿ ಜವಾಬ್ದಾರಿ ನೀಡಲಾಗಿತ್ತು.
ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನವರು. ತಂದೆ ಕೃಷ್ಣಪ್ಪ ತಾಯಿ ಈರಮ್ಮ ದಂಪತಿಗಳ ಪುತ್ರ. ಪ್ರಸ್ತುತ ದಿ.ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆ ಹಿರಿಯ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಕಾಲೇಜು ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣವನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪೂರೈಸಿದರು. ನಂತರ ಪಿಎಚ್‍ಡಿ.ಪದವಿಯನ್ನು ಪಡೆದಿದ್ದಾರೆ. ಬಳಿಕ ಆಂದೋಲನ ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು ನಂತರ ದಿ.ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸೇರಿಕೊಂಡು ಸದ್ಯ ಹಿರಿಯ ಸ್ಥಾನಿಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದಲಿತ ಬಲಗೈ ಸಮುದಾಯದ ಎಫ್.ಎಚ್.ಜಕ್ಕಪ್ಪನವರ್ ಎಐಸಿಸಿ ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಸುಧೀರ್ಘ ಕಾಲ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಶ್ರಮಿಸಿದ್ದು, ಪಕ್ಷದ ವಿವಿಧ ಘಟಕಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.