ಅತ್ಯಾಚಾರ ಪ್ರಕರಣ | ಪ್ರಜ್ವಲ್ ರೇವಣ್ಣ ಕೈದಿ ಸಂಖ್ಯೆ-15528
ಪ್ರಜ್ವಲ್ ರೇವಣ್ಣ
ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೀವನಪಯರ್ಂತ ಜೈಲು ಶಿಕ್ಷೆಗೆ ಗುರಿಯಾಗಿರುವ ಜೆಡಿಎಸ್‍ನ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 15528 ಕೈದಿ ಸಂಖ್ಯೆ ನೀಡಲಾಗಿದೆ.
ಪ್ರಜ್ವಲ್ ರೇವಣ್ಣಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಶನಿವಾರದಿಂದಲೇ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣಗೆ 15528 ಕೈದಿ ಸಂಖ್ಯೆ ನೀಡಲಾಗಿದ್ದು, ಜೈಲು ಸಿಬ್ಬಂದಿ ಪ್ರಜ್ವಲ್ ರೇವಣ್ಣಗೆ ಬಿಳಿಯ ಸಮವಸ್ತ್ರ ನೀಡಿದ್ದಾರೆ.
ಕಾರಗೃಹ ನಿಯಮದಡಿ ಸಜಾಬಂಧಿ ಕಡ್ಡಾಯ ಜೈಲಿನೊಳಗೆ ಪ್ರತಿನಿತ್ಯ 8 ಗಂಟೆಗಳ ಕಾಲ ಕೆಲಸ ಮಾಡಬೇಕು. ಜೊತೆಗೆ ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಕೈದಿಗಳ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಬೇಕು. ಪ್ರಜ್ವಲ್ ಆಯ್ಕೆ ಮಾಡಿಕೊಂಡ ಕೆಲಸಕ್ಕೆ ತಕ್ಕಂತೆ ಸಂಬಳವನ್ನು ಕೂಡ ಪಾವತಿ ಮಾಡಲಾಗುತ್ತೆ. ಮೊದಲು ಒಂದು ವರ್ಷ ಕೌಶಲ್ಯ ರಹಿತ ಕೆಲಸಕ್ಕೆ 524 ರೂಪಾಯಿ ವೇತನ ನೀಡಲಾಗುತ್ತದೆ ಎಂದು ಹೇಳಲಾಗಿದೆ.
ಅನಂತರ ಅರೆ ಕೌಶಲ್ಯ ಮಟ್ಟಕ್ಕೆ ಏರಿಕೆ ಮಾಡಲಾಗುತ್ತೆ. ಬಳಿಕ ಅನುಭವದ ನಂತರ ನುರಿತ ವರ್ಗಕ್ಕೆ ಭಡ್ತಿ ನೀಡಲಾಗುತ್ತದೆ ಎಂದು ಕಾರಗೃಹ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಮಧ್ಯೆ ಕೋರ್ಟ್‍ನಿಂದ ಶಿಕ್ಷೆಗೆ ಒಳಗಾಗಿ ಕಾರಾಗೃಹದಲ್ಲಿರುವ ಪ್ರಜ್ವಲ್ ರೇವಣ್ಣ, ನಿನ್ನೆ ತಡರಾತ್ರಿಯ ವರೆಗೆ ನಿದ್ದೆ ಮಾಡಿಲ್ಲ ಎನ್ನಲಾಗಿದೆ. ಬೆಳಗ್ಗೆ ನಿತ್ಯಕರ್ಮಗಳನ್ನು ಪೂರೈಸಿದ ಬಳಿಕ ಬೆಳಗಿನ ಉಪಹಾರ ಅವಲಕ್ಕಿ ಉಪ್ಪಿಟ್ಟನ್ನು ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.