×
Ad

ಕಾಲ್ತುಳಿತ ಪ್ರಕರಣ | ಸಿಎಂ, ಡಿಸಿಎಂ ನೇರ ಕಾರಣ : ವಿಪಕ್ಷ ನಾಯಕ ಆರ್.ಅಶೋಕ್

Update: 2025-06-05 18:11 IST

ಆರ್.ಅಶೋಕ್

ಬೆಂಗಳೂರು : ನಿನ್ನೆ ನಡೆದ ಕಾಲ್ತುಳಿತದ ದುರಂತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಕಾರಣ. ಈ ಕುರಿತು ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ‘ಎಸ್‍ಐಟಿ’ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿ ತನಿಖೆಗೆ ನಾವು ಒಪ್ಪುವುದಿಲ್ಲ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಬಳಿಗೆ ಪಿಐಎಲ್ ಹೋಗುತ್ತಿದೆ. ಹೈಕೋರ್ಟ್ ನ್ಯಾಯಾಧೀಶರ ಸುಪರ್ದಿಯಲ್ಲೇ ತನಿಖೆ ನಡೆಯಬೇಕಿದೆ. ಇದಕ್ಕಾಗಿ ಎಸ್‍ಐಟಿ ರಚಿಸಬೇಕು. ಇದರ ವರದಿ ನೇರವಾಗಿ ಹೈಕೋರ್ಟ್‍ಗೆ ಸಲ್ಲಿಕೆಯಾಗಬೇಕು. ಇದಕ್ಕೆ ಕಾರಣರಾದವರಿಗೆ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿದರು.

ಇದು ಕ್ರಿಕೆಟ್ ಅಸೋಸಿಯೇಶನ್ ಕಾರ್ಯಕ್ರಮ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಜವಾಬ್ದಾರಿ ಮರೆತಿದ್ದಾರೆ. ತಮ್ಮ ತಪ್ಪನ್ನು ಮುಚ್ಚಿಹಾಕಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ನೋಡಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯನವರ ಕೈ ಕೆಳಗೆ ಕೆಲಸ ಮಾಡುವ, ಅವರಿಗೆ ವರದಿ ಮಾಡಿಕೊಳ್ಳುವ ಜಿಲ್ಲಾಧಿಕಾರಿ ತನಿಖೆ ಮಾಡಿ ಏನು ಗುಡ್ಡೆ ಹಾಕುತ್ತಾರೆ? ಕಾರ್ಯಕ್ರಮದ ಬಗ್ಗೆ ಯೋಚನೆ ಮಾಡಿ, ಅದರ ರೂಪರೇಷೆ ನಿರ್ಧರಿಸಿ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾದ ಜಿಲ್ಲಾಧಿಕಾರಿಗಳೇ ಸರಕಾರದ ಲೋಪದೋಷ, ಎಡವಟ್ಟುಗಳ ಬಗ್ಗೆ ಪ್ರಾಮಾಣಿಕವಾಗಿ ತನಿಖೆ ಮಾಡಿ ವರದಿ ನೀಡುತ್ತಾರೆ ಅಂದರೆ ಅದನ್ನು ನಂಬಲು ಸಾಧ್ಯವಿಲ್ಲ ಎಂದು ಅವರು ಆಕ್ಷೇಪಿಸಿದರು.

ದುರ್ಲಾಭ ಪಡೆಯಲು ಯತ್ನ: ‘ಕಪ್ಪು ನಮ್ದೆ ಎಂದು ಎಲ್ಲರೂ ಹೇಳುತ್ತಿರುವಾಗ, ತಪ್ಪು ಯಾರದ್ದು ಎಂದು ಸರಕಾರವನ್ನು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕಾಲ್ತುಳಿತ ಸರಕಾರದ ಪ್ರಾಯೋಜಿತ ಹತ್ಯಾಕಾಂಡವಾಗಿದೆ. ಮತ್ತೊಬ್ಬರ ಯಶಸ್ಸಿನ ದುರ್ಲಾಭವನ್ನು ಪಡೆಯಲು ಕಾಂಗ್ರೆಸ್ ನಾಯಕರು ಮಾಡಿದ ತಪ್ಪಿನಿಂದಾಗಿ ಈ ಅನಾಹುತ ನಡೆದಿದೆ. ಇವರ ಕೆಟ್ಟ ತೀರ್ಮಾನದಿಂದ ನಮ್ಮ ಮಕ್ಕಳು ಸತ್ತಿದ್ದು, ಇದು ರಾಜ್ಯ ಸರಕಾರದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ದೂರಿದರು.

‘ಕಪ್ ಎತ್ತಿ ಫೋಟೋ ತೆಗೆಸಿಕೊಂಡು ಸಂಭ್ರಮಪಟ್ಟವರು ನಂತರ ಸತ್ತ ಅಮಾಯಕರ ಶವಕ್ಕೆ ಹೆಗಲು ಕೊಡಲು ಬರಲಿಲ್ಲ. ವಿಮಾನ ನಿಲ್ದಾಣಕ್ಕೆ ಹೋಗಿ ಸೆಲ್ಫಿ ತೆಗೆಸಿಕೊಂಡು ಖುಷಿ ಪಟ್ಟವರು ಬಳಿಕ ಸತ್ತವರ ಮನೆಗೆ ಹೋಗಿ ಕಣ್ಣೀರು ಹಾಕಲಿಲ್ಲ. ಕ್ರಿಕೆಟ್ ಆಟಗಾರರಿಗೆ ಪೇಟ ತೊಡಿಸಿ ಹಾರ ಹಾಕಿ ಸನ್ಮಾನ ಮಾಡಿದವರು ಸತ್ತವರ ಸಮಾಧಿಗೆ ಮಣ್ಣು ಹಾಕಲೂ ಬರಲಿಲ್ಲ. ಈ ಹೃದಯಹೀನ ಸರಕಾರದಲ್ಲಿ ಜನಸಾಮಾನ್ಯರ ಜೀವಕ್ಕೆ ಬೆಲೆಯೇ ಇಲ್ಲ’ ಎಂದರು.

ವಿಧಾನಸೌಧದಲ್ಲಿ ಒಂದು ಕಾರ್ಯಕ್ರಮ ನಡೆದ ಬಳಿಕ, ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಐಪಿಎಲ್ ಅಧ್ಯಕ್ಷರು ಇದಕ್ಕೆ ಸ್ಪಷ್ಟೀಕರಣ ನೀಡಿದ್ದು, ಇಲ್ಲಿನ ಕಾರ್ಯಕ್ರಮದ ಆಯೋಜನೆ ಬಗ್ಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ. ಐಪಿಎಲ್ ಅಧ್ಯಕ್ಷರು ನನ್ನ ತಪ್ಪಿಲ್ಲ ಎಂದು ಹೇಳಿದ್ದಾರೆ. ಕೆಎಸ್‍ಸಿಎ ತಪ್ಪು ಇಲ್ಲಿ ಕಾಣುತ್ತಿಲ್ಲ. ಹಾಗಾದರೆ ಆರ್‌ಸಿಬಿ ತಂಡವನ್ನು ವಿಧಾನಸೌಧಕ್ಕೆ ತಂದಿದ್ದು ಯಾರು ಎಂದು ಸರಕಾರ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು.

ಪೋಟೋ ಶೂಟ್‍ಗಾಗಿ ಅಮಾಯಕರ ಬಲಿ: ‘ಮಧ್ಯಾಹ್ನ 3.45ಕ್ಕೆ ಪೂರ್ಣಚಂದ್ರ ಎಂಬ ವ್ಯಕ್ತಿ ಸತ್ತಿದ್ದರು. 4.38ಕ್ಕೆ ದಿವ್ಯಾ ಎಂಬ ಹುಡುಗಿ ಸತ್ತಿದ್ದಾಳೆ. 4.41ಕ್ಕೆ ಒಬ್ಬ ವ್ಯಕ್ತಿ ಸತ್ತಿದ್ದಾರೆ. ಕಾರ್ಯಕ್ರಮ ಆರಂಭವಾಗುವ ಮೊದಲೇ ಜನರು ಕಾಲ್ತುಳಿತಕ್ಕೊಳಗಾಗಿ ತೀರಿಹೋಗಿದ್ದಾರೆ. ಎಲ್ಲ ಸಚಿವರು ಹಾಗೂ ಅವರ ಕುಟುಂಬದವರು ಕ್ರಿಕೆಟಿಗರೊಂದಿಗೆ ಫೊಟೋ ತೆಗೆಸಿಕೊಳ್ಳುವಲ್ಲಿ ನಿರತರಾಗಿದ್ದರು. ಸಚಿವರ ಫೋಟೋ ಶೂಟ್‍ಗಾಗಿ ಅಮಾಯಕ ಯುವಜನರನ್ನು ಬಲಿ ತೆಗೆದುಕೊಳ್ಳಲಾಗಿದೆ. ಜನರು ಸತ್ತ ಸುದ್ದಿ ಗೊತ್ತಾದ ಕೂಡಲೇ ಕಾರ್ಯಕ್ರಮವನ್ನು ಕೂಡಲೇ ರದ್ದು ಮಾಡಬೇಕಿತ್ತು’

-ಆರ್.ಅಶೋಕ್ ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News