ಡಿಕೆಶಿಗೆ ಸಿಎಂ ಆಗುವ ನೈಸರ್ಗಿಕ ಯೋಗ ಇಲ್ಲ, ಶಸ್ತ್ರ ಚಿಕಿತ್ಸೆ ಮೂಲಕವೇ ಆಗಬೇಕು : ಆರ್.ಅಶೋಕ್ ಲೇವಡಿ
ಆರ್.ಅಶೋಕ್
ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ನೈಸರ್ಗಿಕ ಯೋಗ ಇಲ್ಲ. ಶಸ್ತ್ರ ಚಿಕಿತ್ಸೆ ಮೂಲಕವೇ ಅವರು ಸಿಎಂ ಆಗಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆಯೇ ನಾನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಅಧಿಕಾರ ಹಾಗೇ ಸಿಗುವುದಿಲ್ಲ. ನಿಮ್ಮ ಜಾತಕದಲ್ಲಿ ಗುರು, ಶುಕ್ರ, ಶನಿ ಯೋಗ ಇಲ್ಲ. ಹೀಗಾಗಿ ಅವರು ಒದ್ದು ಅಧಿಕಾರ ಕಿತ್ತುಕೊಳ್ಳಬೇಕೆಂದು ಹೇಳಿದ್ದೆ ಎಂದು ಸ್ಮರಿಸಿದರು.
ಕಾಂಗ್ರೆಸ್‍ನಲ್ಲಿ ಕ್ರಾಂತಿ ಶತಸಿದ್ಧ: ಸೆಪ್ಟಂಬರ್ ಕ್ರಾಂತಿ ಆಗುತ್ತದೆ ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿದ್ದಾರೆ. ಇದೀಗ ಕಾಂಗ್ರೆಸ್ ಪಕ್ಷದಲ್ಲಿ ಪೀಠಿಕೆ ಹಾಕಲು ಆರಂಭಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಕ್ಷಿಪ್ರ ಕ್ರಾಂತಿ ಆಗುವುದು ನಿಶ್ಚಿತ ಆಗಿದೆ. ಉಪಮುಖ್ಯಮಂತ್ರಿಯವರನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ಆಗುವಂತಹದ್ದು ಏನಿದೆ? ಎಂದು ಅಶೋಕ್ ಪ್ರಶ್ನಿಸಿದರು.
ಏನ್ ಆಕಾಶ ಬಿತ್ತೇ?: ‘ಜಾತ್ಯತೀತ, ಸಮಾಜವಾದಿ’ ಪದಗಳ ಕುರಿತ ಆರೆಸ್ಸೆಸ್‍ನ ದತ್ತಾತ್ರೇಯ ಹೊಸಬಾಳೆ ಹೇಳಿಕೆಗೆ ಕಾಂಗ್ರೆಸ್ ನಾಯಕರು ಆಕಾಶವೇ ಕೆಳಗೆ ಬಿದ್ದಂತೆ ಆಡುತ್ತಿದ್ದಾರೆ. ಸಂವಿಧಾನ ಪುಸ್ತಕವನ್ನು ಎಳೆದು ತಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮನುವಾದ ಬಗ್ಗೆ ಮಾತಾಡ್ತಾರೆ. ನಾನು ಆರೆಸ್ಸೆಸ್ ಮೂಲದವನು. ನನಗೆ ಮನು ಯಾರು ಎನ್ನುವುದು ಗೊತ್ತಿಲ್ಲ. ಇವರ ತಮ್ಮ ಬೇಳೆ ಬೇಯಿಸಿಕೊಳ್ಳಲು ಮನುವಾದ ತರುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದರು.
ಅಂಬೇಡ್ಕರ್‌ರ ಮೂಲ ಸಂವಿಧಾನದಲ್ಲಿ ಈ ಜಾತ್ಯತೀತ, ಸಮಾಜವಾದ ಪದ ಎಲ್ಲಿದೆ?. ಕಾಂಗ್ರೆಸ್‍ನವರು ಸುಖಾಸುಮ್ಮನೆ ಅಂಬೇಡ್ಕರ್ ಎಳೆದು ತರ್ತಿದ್ದಾರೆ. ಸಂವಿಧಾನದ ಕರಡು ಪ್ರತಿಯಲ್ಲಿ ಜಾತ್ಯತೀತ ಪದ ಯಾವ ಪೇಜಿನಲ್ಲಿದೆ, ಹುಡುಕಿ ಕೊಡಲಿ. ಜಾತ್ಯತೀತ ಎನ್ನುತ್ತಾರೆ, ಜಾತ್ಯತೀತ ಎಲ್ಲಿದೆ ತೋರಿಸಿ?’ ಎಂದು ಅಶೋಕ್ ಕೇಳಿದರು.
ವರದಿ ನೀಡಲು ದಿಲ್ಲಿಗೆ ಹೋಗಿದ್ದೆ :
ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವರಿಷ್ಟರಿಗೆ ವರದಿ ನೀಡಲು ನಾನು ಹೊಸದಿಲ್ಲಿಗೆ ಹೋಗಿದ್ದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ವರದಿ ನೀಡಿ ಬಂದಿದ್ದು, ಪುನಃ ಮೂರು ತಿಂಗಳ ಬಳಿಕ ಮತ್ತೆ ದಿಲ್ಲಿಗೆ ತೆರಳುತ್ತೇನೆ ಎಂದು ಆರ್.ಅಶೋಕ್ ಇಂದಿಲ್ಲಿ ಸ್ಪಷ್ಟಣೆ ನೀಡಿದ್ದಾರೆ.
ವಿವಿಧ ರಾಜ್ಯಗಳ ಅಧ್ಯಕ್ಷರ ಚುನಾವಣೆ ಇದೆ. ಅದನ್ನು ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ಬೇರೆ ರಾಜ್ಯದ ಅಧ್ಯಕ್ಷರ ಹೆಸರು ಘೋಷಣೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ನಮ್ಮ ರಾಜ್ಯದ ಅಧ್ಯಕ್ಷರ ಆಯ್ಕೆ ಬಗ್ಗೆ ವರಿಷ್ಠರು ಸಮಯ ನಿಗದಿ ಮಾಡಲಿದ್ದಾರೆ. ಯಾರು ರಾಜ್ಯಾಧ್ಯಕ್ಷರಾಗಲಿದ್ದಾರೆಂದು ಕಾದುನೋಡಬೇಕು ಎಂದು ಹೇಳಿದರು.