×
Ad

ʼಕಾಲ್ತುಳಿತ ಪ್ರಕರಣʼ ಸಿಬಿಐ ತನಿಖೆಗೆ ವಹಿಸಲು ಆಗ್ರಹಿಸಿ ಸಿಎಂಗೆ ಆರ್.ಅಶೋಕ್ ಪತ್ರ

Update: 2025-07-19 19:20 IST

ಆರ್.ಅಶೋಕ್ 

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಯಾವುದೇ ರಾಜಕೀಯ ಬೆರಸದೆ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಆ ಮೂಲಕ ಪ್ರಕರಣಕ್ಕೆ ಕಾರಣಿಕರ್ತರಾದವರನ್ನು ಗುರುತಿಸಿ, ಪ್ರಾಣ ಕಳೆದುಕೊಂಡ ಅಮಾಯಕರ ಜೀವಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ಶನಿವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಆರ್.ಅಶೋಕ್, ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, 56ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ವಿಷಯವು ರಾಷ್ಟ್ರವ್ಯಾಪಿ ಚರ್ಚೆಯಾಗಿರುತ್ತದೆ.

ಈ ಪ್ರಕರಣವು ಕರ್ನಾಟಕ ಕ್ರೀಡಾ ಇತಿಹಾಸದಲ್ಲಿಯೇ ‘ಕಪ್ಪುಚುಕ್ಕೆ'ಯಾಗಿದೆ. ಈ ವಿಷಯವಾಗಿ ಪೊಲೀಸರು ಮತ್ತು ರಾಜ್ಯ ಸರಕಾರದ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಪೊಲೀಸರು ಜನಸಂದಣಿಯನ್ನು ನಿರ್ವಹಿಸುವಲ್ಲಿ ವೈಫಲ್ಯವಾಗಿದ್ದರ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ಆದರೆ, ಸರಕಾರವು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕೈತೊಳೆದುಕೊಂಡು ಕುಳಿತಿದೆ.

ಈ ಬಗ್ಗೆ ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ)ಯು ಅಧಿಕಾರಿಯೊಬ್ಬರ ಅಮಾನತ್ತಿನ ವಿಚಾರವಾಗಿ ದಾಖಲಾಗಿದ್ದ ಅರ್ಜಿಯ ಮೇಲಿನ ವಿಚಾರಣೆಯಲ್ಲಿ ಇದಕ್ಕೆ ಕೇವಲ ಪೊಲೀಸ್ ಅಧಿಕಾರಿಗಳನ್ನು ಮಾತ್ರ ಹೊಣೆಮಾಡಿದ್ದು ಸೂಕ್ತವಲ್ಲ ಎಂದು ಹೇಳಿದೆ. ಅಮಾಯಕ ಜನರ ಪ್ರಾಣಕ್ಕೆ ಕಾರಣವಾದ ಈ ಪ್ರಕರಣಕ್ಕೆ ನಿಜವಾದ ಕಾರಣಕರ್ತರು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News