×
Ad

ʼಆತ್ಮಸಾಕ್ಷಿ ಇದ್ದರೆ ನಾಡಿನ ಜನತೆಯ ಕ್ಷಮೆ ಕೇಳಿʼ : ಯತೀಂದ್ರ ವಿರುದ್ದ ಆರ್.ಅಶೋಕ್ ಆಕ್ರೋಶ

Update: 2025-07-27 19:13 IST

ಬೆಂಗಳೂರು : ‘ಪರಿಷತ್ ಸದಸ್ಯ ಡಾ.ಯತೀಂದ್ರ ಅವರೇ ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಮೈಸೂರು ರಾಜಮನೆತನದ ಬಗ್ಗೆ ಗೌರವ ಇದ್ದರೆ, ಈ ಕೊಡಲೇ ತಮ್ಮ ಅಸಂಬದ್ಧ ಹೇಳಿಕೆಯನ್ನ ವಾಪಸ್ಸು ಪಡೆದು ನಾಡಿನ ಜನತೆಯ ಬಳಿ ಕ್ಷಮೆ ಕೇಳಿ’ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಇಂದಿಲ್ಲಿ ಆಗ್ರಹಿಸಿದ್ದಾರೆ.

ರವಿವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸಿದ್ದರಾಮಯ್ಯರನ್ನ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಸುವುದು ಹಾಸ್ಯಾಸ್ಪದ. ಮಹಾತ್ಮ ಗಾಂಧಿ ಅವರ ಕೈಯಲ್ಲಿ ರಾಜರ್ಷಿ ಎಂಬ ಬಿರಿದು ಪಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಅಧಿಕಾರಕ್ಕಾಗಿ ನಕಲಿ ಗಾಂಧಿಗಳ ಗುಲಾಮಗಿರಿ ಮಾಡುತ್ತಿರುವ ಸಿದ್ದರಾಮಯ್ಯ ಅವರೆಲ್ಲಿ?’ ಎಂದು ವಾಗ್ದಾಳಿ ನಡೆಸಿದ್ದಾರೆ.

‘ನಾಲ್ವಡಿ ಭೂಪ ಮನೆ ಮನೆ ದೀಪ ಎಂದು ಶತಮಾನದ ನಂತರವೂ ಕನ್ನಡಿಗರು ದಿನನಿತ್ಯ ನೆನೆದುಕೊಳ್ಳುವ ರೀತಿ ಜನ ಮನ್ನಣೆ ಗಳಿಸಿದ್ದ ಅಭಿವೃದ್ಧಿಯ ಹರಿಕಾರರಾದ ಒಡೆಯರ್ ಅವರೆಲ್ಲಿ, ಕರ್ನಾಟಕದ ಪ್ರತಿ ಮನೆಯ ಮೇಲೂ ಸಾಲದ ಹೊರೆ ಹೊರಿಸಿ, ಕರ್ನಾಟಕವನ್ನು ಅಭಿವೃದ್ಧಿ ಶೂನ್ಯ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ?’ ಎಂದು ಅಶೋಕ್ ಟೀಕಿಸಿದ್ದಾರೆ.

ಶತಮಾನದ ಹಿಂದೆಯೇ ಮೈಸೂರು ವಿವಿ ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಅನುದಾನ ಕೊಡಲಾಗದೆ 9 ವಿವಿಗಳನ್ನು ಮುಚ್ಚುತ್ತಿರುವ ಸಿದ್ದರಾಮಯ್ಯ ಅವರೆಲ್ಲಿ?. ತಮ್ಮ ಮನೆಯ ಚಿನ್ನಾಭರಣ ಮಾರಾಟ ಮಾಡಿ ಕೆಆರ್‌ಎಸ್ ಅಣೆಕಟ್ಟು ಕಟ್ಟಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೆಲ್ಲಿ, ಜನಸಾಮಾನ್ಯರಿಗೆ ಸಿಗಬೇಕಾಗಿದ್ದ 14 ಸೈಟು ಕಬಳಿಸಿದ ಸಿದ್ದರಾಮಯ್ಯ ಅವರೆಲ್ಲಿ?. ಭದ್ರಾವತಿ ಉಕ್ಕಿನ ಕಾರ್ಖಾನೆ, ಸ್ಯಾಂಡಲ್ ಸೋಪು ಫ್ಯಾಕ್ಟರಿ, ಮೈಸೂರು ಪೇಪರ್ ಮಿಲ್ಸ್ ಹೀಗೆ ಸಾಲು ಸಾಲು ಕೈಗಾರಿಕೆಗಳನ್ನು ಸ್ಥಾಪಿಸಿದ ನಾಲ್ವಡಿ ಅವರೆಲ್ಲಿ, ಕೈಗಾರಿಕೆಗಳು, ಉದ್ಯಮಿಗಳು, ಹೂಡಿಕೆದಾರರು ರಾಜ್ಯದಿಂದ ವಿಮುಖವಾಗಿವಂತೆ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ? ಎಂದು ಅವರು ಟೀಕಿಸಿದ್ದಾರೆ.

‘ಶತಮಾನದ ಹಿಂದೆಯೇ ಮೊಟ್ಟ ಮೊದಲ ಬಾರಿಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಮಾಜಿಕ ನ್ಯಾಯದ ಬದ್ಧತೆ ಎಲ್ಲಿ, ಸಾಮಾಜಿಕ, ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಬೇಕಾಬಿಟ್ಟಿ ಬಾಗಿಲಿಗೆ ಸ್ಟಿಕರ್ ಅಂಟಿಸುವ ಸಿದ್ದರಾಮಯ್ಯ ಅವರ ಬದ್ಧತೆ ಎಲ್ಲಿ?’ ಎಂದು ಅಶೋಕ್ ಪ್ರಶ್ನೆ ಮಾಡಿದ್ದಾರೆ.

‘ಪರಿಷತ್ ಸದಸ್ಯ ಡಾ.ಯತೀಂದ್ರ, ನಿಮ್ಮ ತಂದೆ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ನಿಮಗೆ ಅಭಿಮಾನ ಇರುವುದು ತಪ್ಪಲ್ಲ. ಆದರೆ ನಮ್ಮ ನಾಡು ಕಂಡ ಧೀಮಂತ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೊಂದಿಗೆ ನಿಮ್ಮ ತಂದೆಯನ್ನು ಹೋಲಿಸುವುದು ಹಾಸ್ಯಾಸ್ಪದ, ಅಸಂಬದ್ಧ ಮತ್ತು ಅದು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಮಾಡುವ ಘೋರ ಅಪಮಾನ ಎಂದು ಅವರು ತಿಳಿಸಿದ್ದಾರೆ.

‘ಅನ್ನ ನೀಡುವ ರೈತರಿಗೆ ಮಣ್ಣು ಮುಕ್ಕಿಸಿದ ಸರಕಾರಕ್ಕೆ ಧಿಕ್ಕಾರ. ಈ ಬಾರಿ ಮುಂಗಾರು ತಿಂಗಳು ಮುಂಚಿತವಾಗಿ ಬಂದಾಗಲೇ ಎಚ್ಚೆತ್ತುಕೊಂಡು ಅಗತ್ಯ ಪ್ರಮಾಣದ ರಸಗೊಬ್ಬರ ದಾಸ್ತಾನು, ವಿತರಣೆ ಬಗ್ಗೆ ಗಮನ ಹರಿಸಬೇಕಾಗಿದ್ದ ಸರಕಾರ, ಬಣ ಬಡಿದಾಟ, ಕುರ್ಚಿ ಕಿತ್ತಾಟದ ಭರಾಟೆಯಲ್ಲಿ ರೈತರನ್ನು ನಿರ್ಲಕ್ಷ್ಯ ಮಾಡಿ ರೈತರು ಮಣ್ಣು ತಿನ್ನುವ ಸ್ಥಿತಿಗೆ ತಂದಿಟ್ಟಿದೆ. ಅನ್ನದಾತರ ಶಾಪ ಈ ಸರಕಾರಕ್ಕೆ ತಟ್ಟದೇ ಇರದು’

-ಆರ್.ಅಶೋಕ್, ವಿಪಕ್ಷ ನಾಯಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News