ಅನರ್ಹ ಪಡಿತರ ಚೀಟಿ ರದ್ದುಗೊಳಿಸಲು ವಿಳಂಬವೇಕೆ? : ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದರೂ ಇದರಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದೆ ವಿಳಂಬವೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನದಲ್ಲಿ ರಾಜ್ಯದ ಪ್ರಗತಿ ಪರಿಶೀಲನೆ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳ ಜತೆ ಸಭೆ ನಡೆಸಿದ ಅವರು,ರಾಜ್ಯದಲ್ಲಿ ಸುಮಾರು ಶೇ.74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಕೇಳಿದರು.
ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ಆರೋಗ್ಯ, ಸಾರಿಗೆ ಸಂಚಾರದಂತಹ ಮೂಲಭೂತ ಸೌಕರ್ಯಗಳು ಲಭಿಸದಿದ್ದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗಿದೆ. ಹಾಡಿಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಲಭ್ಯ ಒದಗಿಸಲು ಇಂದಿಗೂ ಸರಿಯಾಗಿ ಯಾಕೆ ಸಾಧ್ಯವಾಗಿಲ್ಲ. ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸರಿಯಾಗಿ ಹಕ್ಕು ಒದಗಿಸಲು ಯಾಕೆ ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು, ಸಿಇಒಗಳು ಇಂತಹ ಹಾಡಿಗಳಿಗೆ ನಿರಂತರ ಭೇಟಿ ನೀಡಬೇಕು ಎಂದು ತಾಕೀತು ಮಾಡಿದರು.
ಕೆಲವು ಜಿಲ್ಲಾಧಿಕಾರಿಗಳು, ಸಿಇಒಗಳು ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಭೇಟಿಯ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ಶೋಷಿತರು, ಬಡವರು, ಜನಸಾಮಾನ್ಯರು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಬರುತ್ತಾರೆ. ಅಂತವರ ಸಂಕಷ್ಟಗಳನ್ನು ನೀವೇ ಆಲಿಸದಿದ್ದರೆ ಅದನ್ನು ಬಗೆಹರಿಸುವವರು ಯಾರು? ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಅಲ್ಲದೆ, ಯಾರ ಬಳಿ ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು?. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ವಾಸವಿರಬೇಕು. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಲಭ್ಯವಿದ್ದು, ಜನರಿಗೆ ಲಭ್ಯವಿರಬೇಕು. ಇದನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು. ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನನಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಪ್ರವಾಸ ಕಾರ್ಯಕ್ರಮ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ತಪಾಸಣಾ ವರದಿ, ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಶಾಲೆಗಳು, ಹಾಸ್ಟೆಲ್‍ಗಳು, ವಸತಿ ಶಾಲೆಗಳು, ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ನಿರಂತರವಾಗಿ ಭೇಟಿ ನೀಡಬೇಕು. ಮುನ್ಸೂಚನೆ ಇಲ್ಲದೇ ಇಂತಹ ಭೇಟಿಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು ಎಂದು ಪದೇ ಪದೇ ಸೂಚನೆ ನೀಡಿದ್ದೇನೆ. ಆದರೂ ಕೆಲವರು ಇದನ್ನು ಪಾಲಿಸಿಲ್ಲ ಎನ್ನುವ ವರದಿ ನನಗೆ ಬಂದಿದೆ.
ನಿಮ್ಮ ಅಧೀನದಲ್ಲಿರುವ ಇಲಾಖೆಗಳು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವುದು ನಿಮ್ಮ ಜವಾಬ್ದಾರಿ. ನೀವು ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಅಧೀನ ಅಧಿಕಾರಿಗಳು ಕಾರ್ಯನಿರ್ವಹಿಸುವುದನ್ನು ಹೇಗೆ ನಿರೀಕ್ಷಿಸಬಹುದು ಎಂದು ಖಾರವಾಗಿ ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಟ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕು. ಅದರೊಂದಿಗೆ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಕೆರೆ ಒತ್ತುವರಿ: ಸಭೆಯ ವೇಳೆ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎನ್ನುವುದನ್ನು ಪರಿಶೀಲನೆ ನಡೆಸಿದರು. ಆಗ ಎರಡ್ಮೂರು ಜಿಲ್ಲೆಗಳಲ್ಲಿ ಒಂದೂ ಕೆರೆ ಒತ್ತುವರಿ ತೆರವು ಮಾಡದಿರುವುದನ್ನು ಗಮನಿಸಿ ಗರಂ ಆದ ಮುಖ್ಯಮಂತ್ರಿಗಳು, ಆ ಬಗ್ಗೆ ವರದಿ ತರಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸಭೆಯಲ್ಲೇ ಸೂಚನೆ ನೀಡಿದರು.
ರಾಜ್ಯದಲ್ಲಿ 10,931 ಕೆರೆಗಳು ಒತ್ತುವರಿಯಾಗಿದ್ದು, ಇದುವರೆಗೆ 6,065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ. ಕೂಡಲೇ ಇದರ ಬಗ್ಗೆ ಗಮನಹರಿಸಿ, ಎಲ್ಲ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಬೇಕು. ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ರೈತರ ಆತ್ಮಹತ್ಯೆ ಸಿಎಂ ಗರಂ: ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿಗಳು, ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ ಗರಂ ಆಗಿ ಜಿಲ್ಲಾಧಿಕಾರಿಗಳಿಂದ ವರದಿ ಪಡೆದರು. ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ಆದಷ್ಟು ಬೇಗ ಬಗೆಹರಿಸಿ ಪರಿಹಾರ ಒದಗಿಸಿ ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ್, ಡಾ.ಜಿ.ಪರಮೇಶ್ವರ್, ಕೆಜೆ ಜಾರ್ಜ್, ಕೃಷ್ಣ ಭೈರೇಗೌಡ, ಕೆಎಚ್ ಮುನಿಯಪ್ಪ, ಚಲುವರಾಯಸ್ವಾಮಿ, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಝಮೀರ್ ಅಹ್ಮದ್ ಖಾನ್, ಶಿವಾನಂದ ಪಾಟೀಲ್, ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಪ್ರಮುಖರಿದ್ದರು.
ಕರಾವಳಿಗೆ ಶೀಘ್ರ ತೆರಳಲು ಸಿಎಂ ಸೂಚನೆ: ಧಾರಕಾರ ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಕುಸಿತ, ಗೋಡೆ ಕುಸಿತ ಆಗಿ ಸಾವು ಸಂಭವಿಸಿರುವ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ವರದಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಸೂಚಿಸಿದರು.