ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುವುದಿಲ್ಲ: ರವಿಕುಮಾರ್
ಎನ್.ರವಿಕುಮಾರ್
ಬೆಂಗಳೂರು: ಬಿಜೆಪಿ-ಜೆಡಿಎಸ್‍ನ ಯಾವುದೇ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ತಮ್ಮ ದುರಾಡಳಿತವನ್ನು ಮುಚ್ಚಿಹಾಕಲು ಇಂತಹ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‍ಗೆ ಹೋಗುತ್ತಾರೆಂದು ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್‍ನವರು ಮೊದಲು ಸಿಎಂ ಕುರ್ಚಿ ಉಳಿಸಿಕೊಳ್ಳುವುದನ್ನು ನೋಡಲಿ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಿಎಂ ಕುರ್ಚಿಗೆ ಕಿತ್ತಾಟ ಮಾಡುತ್ತಿದ್ದಾರೆ. ಮೊದಲು ಅದನ್ನು ಸರಿಮಾಡಿಕೊಳ್ಳಿ. ಮೊದಲು ನಿಮ್ಮ ಶಾಸಕರ ಬೇಡಿಕೆ ಈಡೇರಿಸಿ. ನಿಮ್ಮ ಶಾಸಕರಿಗೆ ಅನುದಾನ ಕೊಡಿ. ಕಾಂಗ್ರೆಸ್ ಶಾಸಕರೇ ಈ ಸರಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅವರನ್ನು ಸಮಾಧಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿ. ಆ ಮೇಲೆ ನಮ್ಮ ಶಾಸಕರ ಬಗ್ಗೆ ಯೋಚನೆ ಮಾಡಲಿ ಎಂದು ರವಿಕುಮಾರ್ ಹರಿಹಾಯ್ದರು.
ಜೆಡಿಎಸ್ ಶರವಣ ಮಾತನಾಡಿ, ಕಾಂಗ್ರೆಸ್‍ನವರು ತಿರುಕನ ಕನಸು ಕಾಣುತ್ತಿದ್ದಾರೆ. ಸಿಎಂ-ಡಿಸಿಎಂ ನಡುವೆ ಸಿಎಂಗಾಗಿ ಫೈಟ್ ನಡೆಸುತ್ತಿದ್ದಾರೆ. ಅದನ್ನು ಮುಚ್ಚಿ ಹಾಕಲು ಬಿಜೆಪಿ-ಜೆಡಿಎಸ್ ಶಾಸಕರು ಕಾಂಗ್ರೆಸ್‍ಗೆ ಬರುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಇದ್ದರೆ ನಮ್ಮ ವರಿಷ್ಠರು ನೋಡಿಕೊಳ್ಳುತ್ತಾರೆ. ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದರು.