ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯಯಾತ್ರೆ
PC : x/@RCBTweets
ಬೆಂಗಳೂರು: ಸಂಘಟಿತ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ ಅಂತರದಿಂದ ರೋಚಕವಾಗಿ ಮಣಿಸಿತು. ಈ ಮೂಲಕ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ.
ಚೊಚ್ಚಲ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರನ್ನು ಬರಮಾಡಿಕೊಳ್ಳಲು ತವರಿನ ಅಭಿಮಾನಿಗಳು ಸಜ್ಜಾಗಿದ್ದಾರೆ. ಆರ್‌ಸಿಬಿ ತಂಡಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದ್ದು, ತಂಡದ ಆಟಗಾರರು, ತರಬೇತುದಾರರು ಹಾಗೂ ಸಹಾಯಕ ಸಿಬ್ಬಂದಿಗೆ ಸನ್ಮಾನ ಮಾಡಲು ರಾಜ್ಯ ಸರಕಾರವೂ ನಿರ್ಧರಿಸಿದೆ.
ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಬೆಂಗಳೂರಿನಲ್ಲಿ ವಿಜಯಯಾತ್ರೆ ನಡೆಸಲಿದೆ. ಅಹ್ಮದಾಬಾದ್‌ನಿಂದ ಆರ್‌ಸಿಬಿ ತಂಡವು ವಿಶೇಷ ವಿಮಾನದ ಮೂಲಕ ಇಂದು ಮಧ್ಯಾಹ್ನ 1.30 ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದು, ಆ ಬಳಿಕ ವಿಜಯಯಾತ್ರೆಗೆ ಸಿದ್ಧತೆಯನ್ನು ನಡೆಸಲಿದೆ.
ಸಂಜೆ 3.30 ಕ್ಕೆ ಬೆಂಗಳೂರಿನ ವಿಧಾನಸೌಧದಿಂದ ಆರ್‌ಸಿಬಿ ತಂಡದ ವಿಜಯಯಾತ್ರೆ ಆರಂಭವಾಗಲಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಈ ಪರೇಡ್ ಸಾಗಲಿದೆ.
ಆರ್‌ಸಿಬಿ ತಂಡಕ್ಕೆ ಸಿಎಂ ಸನ್ಮಾನ: ಬೆಳಗ್ಗೆ 10 ಗಂಟೆಗೆ ಅಹ್ಮದಾಬಾದ್ ನಿಂದ ಆರ್‌ಸಿಬಿ ಆಟಗಾರರು ನಿರ್ಗಮಿಸಿದ್ದು, ಮಧ್ಯಾಹ್ನ 1:30ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಆರ್‌ಸಿಬಿ ತಂಡದ ಆಟಗಾರರು, ತರಬೇತುದಾರರು, ವ್ಯವಸ್ಥಾಪಕರು ಸೇರಿದಂತೆ ತಂಡದ ಸದಸ್ಯರನ್ನು ಸನ್ಮಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.