×
Ad

ಸಿಎಸ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಪ್ರಕರಣ | ಬಿಜೆಪಿ ಎಂಎಲ್‌ಸಿ ರವಿಕುಮಾರ್‌ಗೆ ರಿಲೀಫ್; ಬಂಧಿಸದಂತೆ ಹೈಕೋರ್ಟ್ ಸೂಚನೆ

Update: 2025-07-04 17:55 IST

                                                                  ಎನ್‌.ರವಿಕುಮಾರ್‌

ಬೆಂಗಳೂರು : ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಪದ ಬಳಕೆ ಆರೋಪ ಪ್ರಕರಣ ಸಂಬಂಧ ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ್‌ಗೆ ಹೈಕೋರ್ಟ್ ರಿಲೀಫ್ ನೀಡಿದೆ.

ಘಟನೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ‌ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ಜುಲೈ.8ರ ವರೆಗೆ ಬಂಧಿಸದಂತೆ ಮಧ್ಯಂತರ ಆದೇಶ ನೀಡಿದೆ.

ಅಲ್ಲದೆ, ಪ್ರಕರಣದ ತನಿಖೆಗೆ ಸಹಕರಿಸಲು ಎನ್‌.ರವಿಕುಮಾರ್‌ಗೆ ಹೈಕೋರ್ಟ್ ತಾಕೀತು ಮಾಡಿದೆ. ಇದಕ್ಕೂ ಮುನ್ನ ಅರ್ಜಿದಾರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ವಿಧಾನಸೌಧದ ಮುಂದೆ ಎನ್.ರವಿಕುಮಾರ್ ಪ್ರತಿಭಟನೆ ನಡೆಸುತ್ತಿದ್ದರು. ಮುಖ್ಯಮಂತ್ರಿಗಳು, ಸರಕಾರ ಸ್ಪಂದಿಸುತ್ತಿಲ್ಲವೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ರಾಜಕೀಯ ಪ್ರೇರಿತವಾಗಿ ಆರೋಪ ಹೊರಿಸಲಾಗಿದೆ ಎಂದು ವಾದ ಮಂಡಿಸಿದರು.

ಈ ವೇಳೆ ವಿಡಿಯೋ ಕ್ಲಿಪ್ ನಲ್ಲಿ ಏನಿದೆ ಎಂದು ನ್ಯಾ.ಎಸ್.ಆರ್.ಕೃಷ್ಣಕುಮಾರ್ ಪ್ರಶ್ನಿಸಿದರು.ಇದಕ್ಕೆ ರವಿಕುಮಾರ್ ಪರ ವಕೀಲರು ವಿಡಿಯೋ ಕ್ಲಿಪ್‌ ಹಾಕಿ ತೋರಿಸಿದರು. ಇದಕ್ಕೆ ಅರ್ಜಿದಾರರು ಸಲ್ಲಿಸಿದ ವಿಡಿಯೋ ಕ್ಲಿಪ್ ಪರಿಗಣಿಸಬಾರದೆಂದು ಎಸ್‌ಪಿಪಿ ಬಿ.ಎ.ಬೆಳ್ಳಿಯಪ್ಪ ಆಕ್ಷೇಪ ವ್ಯಕ್ತಪಡಿಸಿದರು. ದೂರುದಾರರು ಟಿವಿನಲ್ಲಿ ಬಂದಿದ್ದು ನೋಡಿದ್ದೇನೆ ಎಂದಿದ್ದಾರೆ. ಇದರ ಆಧಾರದಲ್ಲಿ ಎಫ್ಐಆರ್ ದಾಖಲಿಸಬಹುದೇ ಎಂದು ಜಡ್ಜ್ ಪ್ರಶ್ನಿಸಿದರು.

ಈ ಕೇಸ್‌ನಲ್ಲಿ ಮುಖ್ಯ ಕಾರ್ಯದರ್ಶಿ ಸಂತ್ರಸ್ತೆಯಾಗಿದ್ದಾರೆ. ನಾವು ಮಾಧ್ಯಮದ ಹೇಳಿಕೆಯನ್ನೂ ಪಡೆಯುತ್ತೇವೆ ಎಂದು ಎಸ್‌ಪಿಪಿ ಬಿ.ಎ.ಬೆಳ್ಳಿಯಪ್ಲ ಉತ್ತರಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ ಮಧ್ಯಂತರ ಆದೇಶ ನೀಡಿ ಜುಲೈ 8 ಕ್ಕೆ ವಿಚಾರಣೆ ಮುಂದೂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News