×
Ad

ಯೂಟ್ಯೂಬ್ ಚಾನಲ್ ಗಳ ಆರಂಭಕ್ಕೆ ಪರವಾನಗಿ ನಿಗಧಿ ಮಾಡುವ ಬಗ್ಗೆ ಪರಿಶೀಲನೆ: ಸಿಎಂ ಸಿದ್ದರಾಮಯ್ಯ

"ನೀವು ಯಾರ ಜೊತೆಗಾದರೂ ಇರಿ, ಆದರೆ, ಸತ್ಯದ ಪರವಾಗಿ ಇರಿ": ಎಲೆಕ್ಟ್ರಾನಿಕ್ ಮೀಡಿಯಾದವರಿಗೆ ಸಿಎಂ ಕರೆ

Update: 2025-09-15 21:01 IST

Photo:X/@siddaramaiah

ಹುಬ್ಬಳ್ಳಿ: ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು.

ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟಿಸಿ, ಲೋಗೋ ಬಿಡುಗಡೆ ಮಾಡಿ ಮಾತನಾಡಿದರು.

ನಾನು ರಾಜಕಾರಣಕ್ಕೆ ಬಂದು ಇಷ್ಟು ವರ್ಷದಲ್ಲಿ ಯಾವ ಮಾಧ್ಯಮಗಳಿಗೂ ನನ್ನ ಬಗ್ಗೆ ಹೀಗೇ ಬರೆಯಿರಿ, ಹಾಗೇ ಬರೆಯಿರಿ ಎಂದು ಯಾವತ್ತೂ ಹೇಳಿಲ್ಲ. ನನ್ನ ಬಗ್ಗೆ ಸುಳ್ಳುಗಳನ್ನು ಸತತವಾಗಿ ತೋರಿಸುವಾಗಲೂ ಯಾಕೆ ಹೀಗೆ ತೋರಿಸ್ತೀರಿ ಅಂತಲೂ ಯಾರಿಗೂ ಕೇಳಿಲ್ಲ. ನಿಮ್ಮಿಂದ ನನಗೆ ಏನೇನೂ ಅಪೇಕ್ಷೆ ಇಲ್ಲ. ಸಾಧ್ಯವಾದರೆ ಸತ್ಯ ತೋರಿಸಿ, ಸತ್ಯ ಬರೆಯಿರಿ ಎಂದರು.

ನನ್ನ ಕಾರಿನ ಮೇಲೆ ಕಾಗೆ ಕುಳಿತದ್ದಕ್ಕೆ ದೊಡ್ಡ ದೊಡ್ಡ ಚರ್ಚೆ ನಡೆಸಿದರು. ಆ ಚರ್ಚೆಯಲ್ಲಿ ಜ್ಯೋತಿಷಿಗಳು, ಚಾನಲ್ ಗಳು ತೋರಿಸಿದ್ದೆಲ್ಲಾ ಅಪ್ಪಟ ಸುಳ್ಳಾಯ್ತು. ನೀವು ಹೀಗೆಲ್ಲಾ ತೋರಿಸಿದರೆ ಜನ ಒಪ್ತಾರಾ ಯೋಚನೆ ಮಾಡಿ ಎಂದರು.

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ‌ ಸರ್ಕಾರ ಸದಾ ಸಿದ್ದ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ ಎಂದರು.

ಸಂಘದ ಬೇಡಿಕೆ:

ಬ್ಲಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್ ಮಾಡುತ್ತಿರುವ ಯೂಟ್ಯೂಬ್ ಚಾನಲ್ ಗಳು ಸಮಾಜಕ್ಕೆ ಶಾಪ ಆಗಿದ್ದು, ಇಂಥವರಿಂದ ಪತ್ರಿಕೋದ್ಯಮದ ಘನತೆ ಹಾಳಾಗಿದೆ. ಹೀಗಾಗಿ ಯೂಟ್ಯೂಬ್ ಚಾನಲ್ ಗಳ ಹಾವಳಿ ತಡೆಯಲು ಇವರಿಗೂ ಲೈಸೆನ್ಸ್ ಕಡ್ಡಾಯಗೊಳಿಸಬೇಕು ಎಂದು ಸಂಘ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿತು. ಈ ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News