×
Ad

ಮುಸ್ಲಿಮರು ಈ ಸಮಾಜದ ನಾಗರಿಕರಲ್ಲವೇ? : ರಿಝ್ವಾನ್ ಅರ್ಶದ್

Update: 2025-03-20 17:31 IST

ಬೆಂಗಳೂರು : ‘ಮುಸ್ಲಿಮರು ಈ ದೇಶದ ನಾಗರಿಕರಲ್ಲವೇ?, ಅವರು ಈ ಸಮಾಜದ ಭಾಗ ಅಲ್ಲವೇ?. ಒಂದು ವೇಳೆ ಅವರು ಪ್ರಾಣಿಗಳು, ಈ ಸಮಾಜದಲ್ಲಿ ಬದುಕಲು ಯೋಗ್ಯರಲ್ಲವೆಂದು ಘೋಷಣೆ ಮಾಡಲಿ’ ಎಂದು ಆಡಳಿತ ಪಕ್ಷದ ಸದಸ್ಯ ರಿಝ್ವಾನ್ ಅರ್ಶದ್, ಇಂದಿಲ್ಲಿ ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.

ಗುರುವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ರಾಜ್ಯ ಬಜೆಟ್ ಬಗ್ಗೆ ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆ ಗಮನಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ‘ಮುಸ್ಲಿಮರ ಬಜೆಟ್, ತುಷ್ಠೀಕರಣದ ಬಜೆಟ್, ಹಲಾಲ್ ಬಜೆಟ್’ ಎಂದು ಟೀಕಿಸಿದ್ದಾರೆ.

‘ಆದರೆ, ಈ ದೇಶ ಹಾಗೂ ರಾಜ್ಯದಲ್ಲಿ ಯಾವ ಮುಸ್ಲಿಮರು ತೆರಿಗೆ ಪಾವತಿಸುವುದಿಲ್ಲವೇ?. ಬೊಕ್ಕಸಕ್ಕೆ ನಮ್ಮ ತೆರಿಗೆ ಹಣ ಹೋಗುವುದಿಲ್ಲವೇ?. ಆ ತೆರಿಗೆಯಲ್ಲಿ ಪಾಲು ಕೇಳುವ ಅಧಿಕಾರ ನಮಗೆ ಇಲ್ಲವೇ?. ಈ ಸಮಾಜದಲ್ಲಿ ನಮಗೆ ಬದುಕಲು ಹಕ್ಕಿಲ್ಲವೇ?. 4.10 ಲಕ್ಷ ಕೋಟಿ ರೂ. ಬಜೆಟ್‍ನ ಪೈಕಿ 4,100 ಕೋಟಿ ರೂ.ಗಳನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಅದು ಬರೀ ಮುಸ್ಲಿಮರಿಗೆ ಮಾತ್ರವಲ್ಲ’ ಎಂದು ರಿಝ್ವಾನ್ ಅರ್ಶದ್ ಉಲ್ಲೇಖಿಸಿದರು.

‘ನಾವು ಎಲ್ಲಿಂದಲೋ ಬಂದವರಲ್ಲ. ನಾವು ನಿಮ್ಮ ಸಹೋದರರು ಎಂಬುದನ್ನು ಮೊದಲು ತಿಳಿದುಕೊಳ್ಳಿ. ನಾವು ಈ ದೇಶದ ಜನ, ಇದೇ ಮಣ್ಣಿನ ಮಕ್ಕಳು. ಇದೇ ಹಿಂದುಳಿದ ವರ್ಗದಿಂದ, ಇದೇ ದಲಿತರಿಂದ ಯಾವಾಗಲೋ ಮತಾಂತರ ಆಗಿರಬಹುದು. ಅದನ್ನು ತಿಳಿದುಕೊಂಡರೂ ನಮ್ಮ ಜೊತೆ ಸಹಾನುಭೂತಿ ಇಲ್ಲವಲ್ಲ’ ಎಂದು ರಿಝ್ವಾನ್ ಅರ್ಶದ್, ಬಿಜೆಪಿ ಸದಸ್ಯರ ವಿರುದ್ಧ ವಾಗ್ಭಾಣ ಬಿಟ್ಟರು.

ಈ ವೇಳೆ ಮಧ್ಯೆಪ್ರವೇಶಿಸಿದ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್, ‘ಕಲ್ಲು ಹೊಡೆಯುವವರು ನಿಮ್ಮವರು. ಜಗಳ ಮಾಡುವವರು ನಿಮ್ಮವರು. ಪಾಕಿಸ್ತಾನದಿಂದ ಹಿಂದೂಗಳನ್ನು ಓಡಿಸಿದ್ದು ನಿಮ್ಮವರು’ ಎಂದು ಟೀಕಿಸಿದರು. ಇದರಿಂದ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪ-ಪ್ರತ್ಯಾರೋಪ ನಡೆಯಿತು.

ಬಳಿಕ ಮಾತನಾಡಿದ ರಿಝ್ವಾನ್ ಅರ್ಶದ್, ‘ಪ್ರಧಾನಿ ಮೋದಿಯವರು ಮುಸ್ಲಿಮ್ ಯುವಕರು ಒಂದು ಕೈಯಲ್ಲಿ ‘ಕುರ್‌ಆನ್’ ಇನ್ನೊಂದು ಕೈಯಲ್ಲಿ ಕಂಪ್ಯೂಟರ್ ಹಿಡಿಯಬೇಕು ಎಂದು ಹೇಳಿದ್ದಾರೆ. ಮೋದಿ ಹೇಳಿಕೆಗೆ ವಿರುದ್ಧವಾಗಿ ಬಿಜೆಪಿಯ ಮುಖಂಡರು, ಸಿದ್ದರಾಮಯ್ಯರ ಬಜೆಟ್ ಅನ್ನು ಟೀಕಿಸಿದ್ದಾರೆ’ ಎಂದು ದೂರಿದರು.

ರಾಜ್ಯದ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.16ರಷ್ಟಿದೆ. ಅಲ್ಪಸಂಖ್ಯಾತರ ಪೈಕಿ ಮುಸ್ಲಿಮರ ಸಂಖ್ಯೆ ಹೆಚ್ಚಿದೆ. ಹೀಗಾಗಿರುವ ಸರಕಾರ ಆ ವರ್ಗಗಳ ಕಲ್ಯಾಣಕ್ಕೆ ಅನುದಾನ ಒದಗಿಸುವುದಿರಲ್ಲಿ ತಪ್ಪೇನಿದೆ. ಬಿಜೆಪಿ ಮುಖಂಡರು ಅನಗತ್ಯ ಟೀಕೆ ಮಾಡುವ ಮೂಲಕ ಜನರಿಗೆ ತಪ್ಪು ಸಂದೇಶ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿ ನಾಯಕರು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ವಿಷಬೀಜ ಬಿತ್ತಿ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ರಾಜ್ಯದ ಘಣತೆ ಏನಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಏನು ಸಂದೇಶ ಹೋಗುತ್ತದೆ ಎಂಬುದ ಆಲೋಚಿಸಬೇಕು. ನಮಗೆ ಬಜೆಟ್‍ನಲ್ಲಿ ನೀಡಿರುವ ಅನುದಾನ ಅತ್ಯಂತ ಕಡಿಮೆಯೇ?, ಸರಕಾರ ಸಮುದಾಯದ ಕಲ್ಯಾಣಕ್ಕಾಗಿ ಇನ್ನೂ ಅನುದಾನ ಒದಗಿಸಬೇಕು ಎಂದು ಅವರು ಕೋರಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News