ರೋಹಿಣಿ ಸಿಂಧೂರಿ ಸಿಡಿಆರ್ ಕೋರಿದ್ದ ರೂಪಾ ಮೌದ್ಗಿಲ್ ಅರ್ಜಿ ವಜಾ; ವಿಚಾರಣೆ ವಿಳಂಬಗೊಳಿಸುವ ತಂತ್ರವೆಂದು ಹೈಕೋರ್ಟ್ ಅಸಮಾಧಾನ
ರೋಹಿಣಿ ಸಿಂಧೂರಿ | ರೂಪಾ ಮೌದ್ಗಿಲ್
ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ನಿರ್ದಿಷ್ಟ ಮೊಬೈಲ್ ಸಂಖ್ಯೆಯ ಕರೆ ದತ್ತಾಂಶ ದಾಖಲೆ (ಸಿಡಿಆರ್) ಕೋರಿರುವುದು ಅಪ್ರಸ್ತುತ ಮತ್ತು ಅನಗತ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ಸಂಬಂಧ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಪ್ರಕಟಿಸಿದ ಹಿನ್ನೆಲೆಯಲ್ಲಿ ರೋಹಿಣಿ ಅವರು ರೂಪಾ ವಿರುದ್ಧ ಹೂಡಿರುವ ಮಾನಹಾನಿ ದಾವೆಯ ಭಾಗವಾಗಿ ನಿರ್ದಿಷ್ಟ ಮೊಬೈಲ್ ಸಂಖ್ಯೆಯ ಸಿಡಿಆರ್ ಹಾಜರುಪಡಿಸಲು ಟೆಲಿಕಾಂ ಕಂಪನಿಗಳಿಗೆ ಆದೇಶಿಸುವಂತೆ ಕೋರಿ ರೂಪಾ ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಜಾಗೊಳಿಸಿತ್ತು. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರೂಪಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ, ರೂಪಾ ಅವರ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ಎತ್ತಿ ಹಿಡಿದಿದೆ. ಸಿಡಿಆರ್ ಪಡೆಯಲು ನಿರ್ದೇಶನ ಕೋರಿ ರೂಪಾ ಸಲ್ಲಿಸಿರುವ ಹಾಲಿ ಅರ್ಜಿಯು ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತೊಂದು ತಂತ್ರವಾಗಿದೆ. ಸಿಡಿಆರ್ ಕೋರುವ ನೆಪದಲ್ಲಿ ರೂಪಾ ಅವರು ವಿಚಾರಣೆಯನ್ನು ವಿಳಂಬಗೊಳಿಸಿದ್ದಾರೆ ಎಂದು ನ್ಯಾಯಾಲಯ ಆದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಹೈಕೋರ್ಟ್ ಆದೇಶದಲ್ಲೇನಿದೆ?
ರೂಪಾ ಅವರು ಸಿಡಿಆರ್ ಹಾಜರುಪಡಿಸಲು ನಿರ್ದೇಶನ ಕೋರಿರುವುದು ದೋಷಪೂರಿತವಾಗಿದ್ದು, ಬಾಕಿ ಇರುವ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ರೋಹಿಣಿ ಅವರ ಬಗ್ಗೆ ರೂಪಾ ಆಕ್ಷೇಪಾರ್ಹವಾದ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದು, ಐಪಿಎಸ್ ಅಧಿಕಾರಿಯೊಬ್ಬರ ದುರ್ಮರಣಕ್ಕೆ ರೋಹಿಣಿ ಕಾರಣ ಎಂದಿರುವುದು, ರೋಹಿಣಿ ಅವರ ಆಕ್ಷೇಪಾರ್ಹ ಚಿತ್ರಗಳನ್ನು ಸಾರ್ವಜನಿಕಗೊಳಿಸುವ ಮೂಲಕ ಅವರನ್ನು ಕೆಟ್ಟದಾಗಿ ಬಿಂಬಿಸಿರುವ ಆರೋಪವಿದೆ. ಇದು ಮಾನಹಾನಿಯ ವ್ಯಾಪ್ತಿಗೆ ಬರಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ರೋಹಿಣಿ ಅವರ ಮೊಬೈಲ್ ಸಂಖ್ಯೆಯ 2 ವರ್ಷಗಳ ಅವಧಿಯ ಸಿಡಿಆರ್ ಕೇಳಿರುವುದಕ್ಕೂ, ರೂಪಾ ಅವರು ಮಾಡಿರುವ ಫೇಸ್‌ಬುಕ್ ಪೋಸ್ಟ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಸಿಡಿಆರ್ ಹಾಜರುಪಡಿಸಲು ರೂಪಾ ನಿರ್ದೇಶನ ಕೋರಿರುವುದು ರೋಹಿಣಿ ಪರ ಹಿರಿಯ ವಕೀಲರು ಹೇಳಿರುವಂತೆ ವಿಚಾರಣೆಯ ಹಾದಿ ತಪ್ಪಿಸುವ ಕ್ರಮವಾಗಿದೆ. ಒಂದೊಮ್ಮೆ ರೋಹಿಣಿ ಅವರು ಮುನೀಶ್ ಮೌದ್ಗಿಲ್ (ರೂಪಾ ಪತಿ) ಅವರ ಜತೆ ಸಂಪರ್ಕದಲ್ಲಿದ್ದರು ಎಂದುಕೊಂಡರೂ ಮುನೀಶ್ ಅವರ ದಾಖಲೆಗಳನ್ನು ಹಾಜರುಪಡಿಸಿ, ಅವರನ್ನು ಡಿಫೆನ್ಸ್ ಸಾಕ್ಷಿಯಾಗಿ ವಿಚಾರಣೆಗೆ ಒಳಪಡಿಸಲು ರೂಪಾ ಅವರನ್ನು ಯಾರೂ ತಡೆಯುತ್ತಿಲ್ಲ ಎಂಬ ವಾದದಲ್ಲಿ ಬಲವಿದೆ ಎಂದು ಹೈಕೋರ್ಟ್ ಹೇಳಿದೆ.
ರೂಪಾ ವಾದವೇನು?
ಅರ್ಜಿ ವಿಚಾರಣೆ ವೇಳೆ ರೂಪಾ ಪರ ಹಿರಿಯ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿ, ಪಾಟೀ ಸವಾಲಿನ ವೇಳೆ ದೂರುದಾರೆ (ರೋಹಿಣಿ ಸಿಂಧೂರಿ) ಮುನೀಶ್ ಮೌದ್ಗಿಲ್ ಅವರ ಜತೆ ಫೋನ್‌ನಲ್ಲಿ ಸಂಪರ್ಕದಲ್ಲಿ ಇದ್ದುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಮುನೀಶ್ ಫೋನ್ ನಂಬರ್ ತನಗೆ ತಿಳಿದಿಲ್ಲ ಎಂದು ರೋಹಿಣಿ ಹೇಳಿದ್ದಾರೆ. ಹೀಗಾಗಿ, ರೋಹಿಣಿ ಸಿಂಧೂರಿ ಅವರ ಸುಳ್ಳನ್ನು ಬಹಿರಂಗಪಡಿಸಲು ಸಿಡಿಆರ್ ಹಾಜರುಪಡಿಸಲು ನಿರ್ದೇಶಿಸುವುದು ಅಗತ್ಯ. ರೋಹಿಣಿ ಅವರು ನಿರಂತರವಾಗಿ ಮುನೀಶ್ ಮೌದ್ಗಿಲ್ ಜತೆ ಸಂಪರ್ಕದಲ್ಲಿದ್ದರು ಎಂಬುದನ್ನು ತೋರಿಸಲು ಸಿಡಿಆರ್ ಅಗತ್ಯವಾಗಿದೆ. ಈ ಸಿಡಿಆರ್ ಅನ್ನು ನಿರ್ದಿಷ್ಟ ಸಮಯದ ನಂತರ ಟೆಲಿಕಾಂ ಕಂಪನಿಗಳು ಡಿಲೀಟ್ ಮಾಡುವುದರಿಂದ ಅದನ್ನು ಸಂಗ್ರಹಿಸಿಡಲು ನಿರ್ದೇಶಿಸಬೇಕು ಎಂದು ಕೋರಿದ್ದರು.
ರೂಪಾ ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಡಿಆರ್ ಅತ್ಯಂತ ಮುಖ್ಯ. ಹಾಲಿ ದಾವೆ ಹೂಡುವವರೆಗೂ ರೋಹಿಣಿ ಅವರು ಮುನೀಶ್ ಜತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಸಿಡಿಆರ್ ಕರೆ ದಾಖಲೆಯನ್ನಲ್ಲದೇ ಎಲ್ಲಿಂದ ಕರೆ ಮಾಡಲಾಗಿದೆ ಎಂಬುದನ್ನೂ ತೋರಿಸಲಿದೆ. ಇವರೆಡನ್ನೂ ತುಲನೆ ಮಾಡಿ ನೋಡಿದಾಗ ನಿರಂತರವಾಗಿ ಯಾವ ಸ್ಥಳದಿಂದ ಆ ಸಂಖ್ಯೆ ಕರೆ ಬಂದಿದೆ ಎಂಬುದು ಬಹಿರಂಗವಾಗಲಿದೆ. ನ್ಯಾಯಯುತ ವಿಚಾರಣೆಯ ದೃಷ್ಟಿಯಿಂದ ಸಿಡಿಆರ್ ಪಡೆಯಲು ನಿರ್ದೇಶಿಸಬೇಕು. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರೂಪಾ ಅವರ ಅರ್ಜಿ ವಜಾಗೊಳಿಸುವಾಗ ಸಿಡಿಆರ್ ಪ್ರಸ್ತುತವಲ್ಲ ಎಂದಿದೆ. ಆದರೆ, ಅದು ಹಾಲಿ ಪ್ರಕರಣಕ್ಕೆ ಏಕೆ ಅಗತ್ಯವಿಲ್ಲ ಎಂಬುದನ್ನು ಹೇಳಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.
ರೋಹಿಣಿ ವಾದವೇನು?
ಇದನ್ನು ಆಕ್ಷೇಪಿಸಿದ್ದ ರೋಹಿಣಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ್, ರೂಪಾ ಅವರು ರೋಹಿಣಿ ವಿರುದ್ಧ ಫೇಸ್‌ಬುಕ್‌ನಲ್ಲಿ ಹಲವು ಮಾನಹಾನಿ ಪೋಸ್ಟ್‌ಗಳನ್ನು ಹಾಕಿದ್ದನ್ನು ಆಧರಿಸಿ ಖಾಸಗಿ ದೂರು ದಾಖಲಿಸಲಾಗಿದೆ. ವಿಚಾರಣಾ ನ್ಯಾಯಾಲಯದಲ್ಲಿ ರೂಪಾ ಅವರು ಪದೇಪದೆ ವಿಚಾರಣೆಯನ್ನು ವಿಳಂಬಗೊಳಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರೋಹಿಣಿ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ರೂಪಾಗೆ ಅವಕಾಶ ನಿರಾಕರಿಸಿತ್ತು. ಅಂತಿಮವಾಗಿ ರೂಪಾ ಅವರಿಗೆ 10 ಸಾವಿರ ರೂ. ದಂಡ ವಿಧಿಸಿ, ರೋಹಿಣಿ ಅವರನ್ನು ಪಾಟೀ ಸವಾಲಿಗೆ ಒಳಪಡಿಸಲು ಕೊನೆಯ ಒಂದು ಅವಕಾಶವನ್ನು ಹೈಕೋರ್ಟ್‌ನ ಸಮನ್ವಯ ಪೀಠ ನೀಡಿತ್ತು. ಹಾಲಿ ದಾವೆಯು ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತೊಂದು ಪ್ರಯತ್ನವಾಗಿದ್ದು, ಕಾನೂನಿನ ಪರಿಣಾಮ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ರೂಪಾ ಈ ಯತ್ನ ಮಾಡಿದ್ದಾರೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ವ್ಯಕ್ತಿಯೊಬ್ಬರ ಸಿಡಿಆರ್ ನೀಡಲು ನಿರ್ದೇಶನ ಕೋರುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಇದು ಖಾಸಗಿ ಹಕ್ಕಿನ ಉಲ್ಲಂಘನೆಯಾಗಲಿದೆ. ಸಿಡಿಆರ್‌ನಲ್ಲಿ ಕರೆಯ ಮೆಟಾಡೇಟಾ ಇರುತ್ತದೆಯೇ ವಿನಃ ಸಂಭಾಷಣೆಯ ವಿವರ ಇರುವುದಿಲ್ಲ. ರೋಹಿಣಿ ಅವರು ಮುನೀಶ್‌ಗೆ (ರೂಪಾ ಪತಿ) ಕರೆ ಮಾಡಿದ್ದರು ಎಂಬುದನ್ನು ಪತ್ತೆ ಮಾಡುವುದು ರೂಪಾ ಅವರ ಸೀಮಿತ ಗುರಿಯಾಗಿದೆ ಎನಿಸುತ್ತದೆ. ಇದಕ್ಕೆ ಬದಲಾಗಿ ರೂಪಾ ಅವರು ಮುನೀಶ್ ಅವರ ಸಿಡಿಆರ್ ಪಡೆದು, ಅವರನ್ನೇ ತನ್ನ ಡಿಫೆನ್ಸ್ ಸಾಕ್ಷಿಯನ್ನಾಗಿ ಪರಿಶೀಲನೆಗೆ ಒಳಪಡಿಸುವುದು ಉತ್ತಮ. ರೂಪಾ ಈಗ ಕೋರುತ್ತಿರುವ ಸಿಡಿಆರ್ ಮತ್ತು ಆಕೆ ಫೇಸ್‌ಬುಕ್‌ನಲ್ಲಿ ರೋಹಿಣಿ ವಿರುದ್ಧ ಆರೋಪಿಸಿದ್ದ ಪೋಸ್ಟ್‌ಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದರು.