×
Ad

ಆರೆಸ್ಸೆಸ್ ಸ್ವಯಂಸೇವಕರಿಗೆ ಲಾಠಿ ಹಿಡಿಯಲು ಅನುಮತಿ ನಿರಾಕರಿಸುವಂತೆ ಸರಕಾರಕ್ಕೆ ಆಗ್ರಹ

Update: 2025-10-29 22:54 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ನ.2ರಂದು ಚಿತ್ತಾಪುರದಲ್ಲಿ ಆರೆಸ್ಸೆಸ್ ಸ್ವಯಂಸೇವಕರ ಪಥ ಸಂಚಲನ ಕುರಿತಾದ ವಿವಾದವು ಪ್ರಜ್ಞಾವಂತರಲ್ಲಿ ಆತಂಕ ಮೂಡಿಸಿದೆ. ಹಿಂಸೆಗೆ ಪ್ರಚೋದನೆ ನೀಡುವ ಸಾಧ್ಯತೆ ಇರುವ ಕಾರಣ ಸರಕಾರವು ಆರೆಸ್ಸೆಸ್ ಸ್ವಯಂಸೇವಕರಿಗೆ ಪಥ ಸಂಚಲನ ನೆಪದಲ್ಲಿ ಲಾಠಿ ಹಿಡಿದು ತಿರುಗಾಡುವುದಕ್ಕೆ ಅನುಮತಿ ಕೊಡಬಾರದು ಎಂದು ಸಾಹಿತಿಗಳು, ಕಲಾವಿದರು, ಚಿಂತಕರು, ಹೋರಾಟಗಾರರು ಸೇರಿದಂತೆ ಪ್ರಗತಿಪರರು ಆಗ್ರಹಿಸಿದ್ದಾರೆ.

ಬುಧವಾರ ಸಾಹಿತಿಗಳಾದ ಜಿ.ರಾಮಕೃಷ್ಣ, ಕೆ.ಮರುಳಸಿದ್ದಪ್ಪ, ಡಾ.ವಿಜಯಾ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಮಾವಳ್ಳಿ ಶಂಕರ್, ಬಂಜಗೆರೆ ಜಯಪ್ರಕಾಶ್, ಬಿ.ಶ್ರೀಪಾದ ಭಟ್, ಮೀನಾಕ್ಷಿ ಬಾಳಿ, ಕೆ.ಎಸ್.ವಿಮಲಾ, ರುದ್ರಪ್ಪ ಹನಗವಾಡಿ ಸೇರಿ ಮತ್ತಿತರರು ಜಂಟಿ ಪ್ರಕಟನೆಯನ್ನು ಹೊರಡಿಸಿದ್ದಾರೆ.

ಸಾರ್ವಜನಿಕವಾಗಿ ಯಾವುದೇ ಬಗೆಯ ಆಯುಧ ಹಿಡಿದು ತಿರುಗಾಡುವುದು ಅಪರಾಧವಾಗುತ್ತದೆ. ಆದರೆ ಎರಡು ವಾರಗಳ ಹಿಂದೆ ಆರೆಸ್ಸೆಸ್ ಶತಮಾನೋತ್ಸವ ಅಂಗವಾಗಿ ಬೆಂಗಳೂರಿನ ವಿವಿಧೆಡೆ ಸ್ವಯಂ ಸೇವಕರು ಲಾಠಿ ಝಳಪಿಸುತ್ತಾ ಪಥ ಸಂಚಲನ ಕಾರ್ಯಕ್ರಮ ನಡೆಸಿದರು. ಇದು ಟೀಕೆಗೆ ಗುರಿಯಾಗಿತ್ತು ಎಂದು ಅವರು ಹೇಳಿದ್ದಾರೆ.

ಅರವತ್ತು ವರ್ಷಗಳಲ್ಲಿ ಆರೆಸ್ಸೆಸ್ ಅನೇಕ ಪಥ ಸಂಚಲನಗಳು ಕೋಮು ಗಲಭೆಗಳಿಗೆ ಪ್ರಚೋದನೆಯಾಗಿವೆ. ಜನಪರವಾದ ಯಾವುದೇ ವಿಷಯಗಳನ್ನು ಕುರಿತು ಶಾಂತ ‘ಪ್ರತಿರೋಧ ನಡೆಸುವುದನ್ನು ನಿರಾಕರಿಸಲು ಹೈಕೋರ್ಟ್ ಆದೇಶವಿದೆ’ ಎಂದು ಕೇಸು ದಾಖಲಿಸುವ ಬೆಂಗಳೂರು ನಗರ ಪೊಲೀಸರು, ಆರೆಸ್ಸೆಸ್ ಸ್ವಯಂಸೇವಕರಿಗೆ ಬೆಂಗಳೂರಿನ ಹಲವು ಕಡೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಪಥ ಸಂಚಲನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಅವರು ಖಂಡಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಮುಕ್ತವಾಗಿ, ಅಹಿಂಸಾತ್ಮಕವಾಗಿ, ಯಾವುದೇ ದ್ವೇಷ ಬಿತ್ತದೆ ಸಾರ್ವಜನಿಕವಾಗಿ ಜಾಥಾ ಮಾಡಲು ಅವಕಾಶವಿದೆ. ಆರೆಸೆಸ್ ಸಂಘಟನೆಯೂ ಲಾಠಿಯನ್ನು ತ್ಯಜಿಸಿ ರಾಷ್ಟ್ರೀಯ ಧ್ವಜ ಮತ್ತು ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಪಥ ಸಂಚಲನೆ ಮಾಡಬಹುದು. ಈ ನೀತಿಯನ್ನು ಚಿತ್ತಾಪುರಕ್ಕೂ ಅನ್ವಯಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಕೋಮು ಶಕ್ತಿಗಳನ್ನು ನಿಯಂತ್ರಿಸಲು ಸರಕಾರವು ಇಚ್ಚಾಶಕ್ತಿ ಪ್ರದರ್ಶಿಸಬೇಕು ಎಂದು ಸಾಹಿತಿಗಳು, ಚಿಂತಕರು ಒತ್ತಾಯಿಸಿದ್ದಾರೆ.

ಮುಂದಿನ ದಿನಗಳಲ್ಲಿ ಆರೆಸ್ಸೆಸ್ ನಿರಂತರವಾದ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿರುವುದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಸಾಮರಸ್ಯ, ಸಹಬಾಳ್ವೆ ಕಾಪಾಡಲು ಪ್ರಜಾಪ್ರಭುತ್ವವಾದಿಗಳೂ ಒಗ್ಗೂಡಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News