×
Ad

ದೊಣ್ಣೆ ಹಿಡಿದು ಆರೆಸ್ಸೆಸ್ ಪಥಸಂಚಲನ ನಡೆಸಲು ಅನುಮತಿ ನೀಡಬಾರದು: ದಸಂಸ ಒಕ್ಕೂಟ ಆಗ್ರಹ

Update: 2025-10-25 20:31 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸೇರಿದಂತೆ ಯಾವುದೇ ಸಂಘ-ಸಂಸ್ಥೆಗಳು ಮೆರವಣಿಗೆ, ಪ್ರತಿಭಟನೆ ಮಾಡಬಹುದೇ ಹೊರತು, ‘ಪಥಸಂಚಲನ'ವನ್ನಲ್ಲ. ಸರಕಾರ ದೃಢ ನಿಲುವು ತಾಳುವುದರ ಮೂಲಕ ದೊಣ್ಣೆ ಹಿಡಿದು ಆರೆಸ್ಸೆಸ್ ಪಥಸಂಚಲನ ನಡೆಸುವುದಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು’ ಎಂದು ದಸಂಸ ಒಕ್ಕೂಟ ಆಗ್ರಹಿಸಿದೆ.

ಶನಿವಾರ ಈ ಕುರಿತು ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ, ದಸಂಸ ಹಿರಿಯ ಮುಖಂಡರಾದ ಎನ್. ವೆಂಕಟೇಶ್, ಎನ್.ಮುನಿಸ್ವಾಮಿ, ಗುರುಪ್ರಸಾದ್ ಕೆರೆಗೋಡು, ವಿ.ನಾಗರಾಜು, ಮಾವಳ್ಳಿ ಶಂಕರ್ ಜಂಟಿ ಪತ್ರಿಕಾ ಹೇಳಿಕೆ ನೀಡಿದ್ದು, ಸಂವಿಧಾನಿಕವಾಗಿ ಪಥಸಂಚಲನ ಮಾಡುವ ಅಧಿಕಾರ ಇರುವುದು ಪೊಲೀಸ್ ಮತ್ತು ರಕ್ಷಣಾ ಪಡೆಗಳಿಗೆ ಮಾತ್ರ. ಆರೆಸ್ಸೆಸ್ ಮೆರವಣಿಗೆ ಮಾಡಲು ಬಯಸಿದರೆ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ಮಾರಕಾಸ್ತ್ರಗಳಲ್ಲಿ ಒಂದಾದ ದೊಣ್ಣೆ ಹಿಡಿದು ಮೆರವಣಿಗೆ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಹೀಗಾಗಿ ಸಂವಿಧಾನ ವಿರೋಧಿ ನಡೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ತಿಳಿಸಿದ್ದಾರೆ.

ದೇಶದ ಯಾವುದೇ ಕಾನೂನಿನ ಅನ್ವಯ ನೋಂದಣಿ ಆಗದೇ ಇರುವ ಆರೆಸ್ಸೆಸ್ ಸರಕಾರಿ/ಅನುದಾನಿತ ಶಾಲಾ-ಕಾಲೇಜು ಆವರಣದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೊಣ್ಣೆ ಹಿಡಿದು ಪಥಸಂಚಲನ ಸೇರಿದಂತೆ ಇನ್ನಿತರ ಜನ ವಿರೋಧಿ, ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ, ಪ್ರತಿರೋಧ ವ್ಯಕ್ತಪಡಿಸಿ ಸಚಿವ ಪ್ರಿಯಾಂಕ್ ಖರ್ಗೆ ಆರಂಭಿಸಿರುವ ‘ಸೈದ್ಧಾಂತಿಕ ಹೋರಾಟ'ವನ್ನು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟವು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಎತ್ತಿರುವ ಸೈದ್ಧಾಂತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಹತಾಶೆಯಲ್ಲಿರುವ ಆರೆಸ್ಸೆಸ್ ಮತ್ತು ಬಿಜೆಪಿಯು, ಪ್ರಿಯಾಂಕ್ ಖರ್ಗೆ ಮತ್ತವರ ಕುಟುಂಬದ ಮೇಲೆ ವೈಯಕ್ತಿಕವಾಗಿ ಕ್ಷುಲ್ಲಕ ದಾಳಿ ನಡೆಸುತ್ತಾ, ದ್ವೇಷ ಕಾರುತ್ತಿರುವುದನ್ನು ಹಾಗೂ ‘ಪ್ರಿಯಾಂಕ ಖರ್ಗೆ ಮನೆಗೇ ನುಗ್ಗುತ್ತೇವೆ’ ಎಂದು ಬೆದರಿಕೆ ಹಾಕಿರುವ ಬಿಜೆಪಿಯ ಮಣಿಕಂಠ ರಾಥೋಡ್ ಗೂಂಡಾಗಿರಿ ನಡೆಯನ್ನು ಖಂಡಿಸುತ್ತೇವೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಎಂದೂ ಭಾಗವಹಿಸದ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನು ಒಪ್ಪದ ಆರೆಸ್ಸೆಸ್ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಪಾರಮ್ಯವನ್ನು ಸಾಮಾನ್ಯ ಜನರ ಮೇಲೆ ಹೇರುತ್ತಿದೆ ಎಂದು ದೂರಿದ್ದಾರೆ.

ಜನರ ಮನಸ್ಸಿನಲ್ಲಿ ಜಾತೀಯತೆ-ಮತೀಯತೆ, ಮೌಢ್ಯತೆ, ಮೂಢನಂಬಿಕೆಗಳ ವಿಷ ಬೀಜ ಬಿತ್ತುತ್ತಿದೆ. ಆರೆಸ್ಸೆಸ್‍ನ ಮೋಹನ್ ಭಾಗವತ್‍ರಿಂದ ತಳಹಂತದ ಎಲ್ಲ ಪದಾಧಿಕಾರಿಗಳವರೆಗೂ ಬ್ರಾಹ್ಮಣರದ್ದೆ ಪಾರುಪತ್ಯ. ಬಜರಂಗ ದಳ, ಶ್ರೀರಾಮ್ ಸೇನೆ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸೇರಿದಂತೆ ಹಿಂದುತ್ವದ ಹೆಸರಿನಲ್ಲಿ ಶೂದ್ರ ಸಮುದಾಯದ ಯುವಕರಿಗೆ ದೊಣ್ಣೆ, ತಲವಾರ್, ತ್ರಿಶೂಲ ಸೇರಿ ಮಾರಕಾಸ್ತ್ರಗಳನ್ನು ನೀಡಿ ಕೋಮು ಹಿಂಸಾ ಕೃತ್ಯಗಳಿಗೆ ಪ್ರೇರೇಪಿಸುತ್ತಾ ಶೂದ್ರ ಯುವಕರನ್ನು ಕಾಲಾಳುಗಳನ್ನಾಗಿ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾತಂತ್ರ, ಸಮಾನತೆ, ಸಹೋದರತೆ ಹಾಗೂ ಜಾತ್ಯತೀತೆಯನ್ನು ಒಪ್ಪದ ಆರೆಸ್ಸೆಸ್ ಒಂದೇ ಧರ್ಮದ ಚೌಕಟ್ಟಿನೊಳಗೆ ದೇಶ ಕಟ್ಟುವ ಮಾತನಾಡುತ್ತಿದೆ. ಸಮತೆ-ಮಮತೆ, ಅಂತಃಕರಣ ಮಾನವೀಯತೆ ಮತ್ತು ಕೋಮು ಸಾಮರಸ್ಯದಂತಹ ಗುಣಗಳನ್ನು ಎಂದೂ ಮೈಗೂಡಿಸಿಕೊಳ್ಳದ ಆರೆಸ್ಸೆಸ್ ಸ್ಪೃಶ್ಯ-ಅಸ್ಪೃಶ್ಯ, ಮಡಿ-ಮೈಲಿಗೆ, ಲಿಂಗ ತಾರತಮ್ಯದಂತಹ ಅಸಮಾನತೆಯನ್ನು ಬೆಂಬಲಿಸುತ್ತಿದೆ. ರಾಜ್ಯಾಂಗದ ಬದಲಿಗೆ ಪಂಚಾಂಗದ ಮೂಲಕ ಆಡಳಿತ ನಡೆಸಲು ಹವಣಿಸುತ್ತಿರುವ ಆರೆಸ್ಸೆಸ್‍ನ ಇಂತಹ ಅನಾಗರಿಕ ಪ್ರವೃತ್ತಿಯನ್ನು ನಾಗರಿಕ ಸಮಾಜವು ಖಂಡಿಸಬೇಕಾಗಿರುವುದಲ್ಲದೆ, ಅದರ ವಿರುದ್ಧವೂ ದನಿ ಎತ್ತಬೇಕಿದೆ ಎಂದು ದಸಂಸ ಒಕ್ಕೂಟ ಕರೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News