×
Ad

ಆಡಳಿತಾರೂಢ ಕಾಂಗ್ರೆಸ್ ಸರಕಾರ ತುರ್ತು ನಿಗಾ ಘಟಕದಲ್ಲಿದೆ: ಆರ್. ಅಶೋಕ್

"ರಾಜ್ಯದಲ್ಲಿ ಇದೀಗ ವಿಧಾನಸಭೆ ಚುನಾವಣೆ ನಡೆಯುವ ಸ್ಥಿತಿ ಇದೆ"

Update: 2025-11-11 20:31 IST

ಬೆಂಗಳೂರು: ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿದೆ. ಆದರೆ, ರಾಜ್ಯದಲ್ಲಿನ ಪರಿಸ್ಥಿತಿ ಗಮನಿಸಿದರೆ ಇದೀಗ ವಿಧಾನಸಭೆ ಚುನಾವಣೆ ನಡೆಯುವ ಸ್ಥಿತಿ ಇದ್ದು, ಯಾವ ಚುನಾವಣೆ ಮೊದಲು ನಡೆಯಲಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.

ಮಂಗಳವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಸರಕಾರ ತುರ್ತು ನಿಗಾ ಘಟಕದಲ್ಲಿದೆ. ಯಾರು ಮುಖ್ಯಮಂತ್ರಿ ಎಂಬುದೇ ತಿಳಿಯುತ್ತಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬಂಡಾಯ ಹೂಡಿದ್ದು, ಬಿಜೆಪಿ, ಯಾವುದೇ ಕಾರಣಕ್ಕೂ ಯಾರನ್ನೂ ಪಕ್ಷಾಂತರ ಮಾಡುವುದಿಲ್ಲ. ನಾವು ಚುನಾವಣೆಯನ್ನು ಅಪೇಕ್ಷಿಸುತ್ತೇವೆ ಎಂದರು.

ಎನ್‍ಐಎಗೆ ವಹಿಸಿ: ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದನೆ ಆರೋಪಿಗೆ ಮೊಬೈಲ್‍ಫೋನ್ ಬಳಸಲು ಅವಕಾಶ ಕೊಟ್ಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದ (ಎನ್‍ಐಎ) ತನಿಖೆಗೆ ನೀಡಬೇಕು. ಈ ಕುರಿತು ಹೆಚ್ಚು ತನಿಖೆ ಮಾಡಿದರೆ ಹೊಸ ವಿಚಾರಗಳು ಗೊತ್ತಾಗುತ್ತದೆ. ಇದು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯ ಎಂದರು.

ವೈದ್ಯರು ಸೇರಿದಂತೆ ಹೆಚ್ಚು ಶಿಕ್ಷಣ ಪಡೆದ ಮುಸ್ಲಿಮ್ ಸಮುದಾಯದವರೇ ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ. ಆದುದರಿಂದ ಕಾಂಗ್ರೆಸ್ ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕಿದೆ. ಅಧಿಕಾರಕ್ಕೆ ಬರಲು ಓಲೈಕೆ ಮಾಡುವುದರಿಂದ ಹೀಗೆಲ್ಲ ಆಗುತ್ತಿದೆ. ಜೈಲಿನಲ್ಲೂ ಕಾಂಗ್ರೆಸ್‍ನ ತಪ್ಪಿನಿಂದಲೇ ಉಗ್ರವಾದಿಗಳು ಮೊಬೈಲ್ ಬಳಸುವಂತಾಗಿದೆ ಎಂದರು.

ಇದು ಮನಮೋಹನ್ ಸಿಂಗ್ ಸರಕಾರವಲ್ಲ. ಪ್ರಧಾನಿ ಮೋದಿ ಸರಕಾರದಲ್ಲಿ ಭಯೋತ್ಪಾದಕರಿಗೆ ಯಾವುದೇ ವಿನಾಯಿತಿ ನೀಡುವುದಿಲ್ಲ ಎಂಬುದು ಜಗತ್ತಿಗೆ ತಿಳಿದಿದೆ. ಈ ಘಟನೆಯ ವಿರುದ್ಧವೂ ಕೇಂದ್ರ ಸರಕಾರ ಕಠಿಣ ಕ್ರಮ ವಹಿಸಲಿದೆ. ನಕ್ಸಲ್ ಚಟುವಟಿಕೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನಿರ್ಮೂಲನೆ ಮಾಡಿದ್ದಾರೆ. ಅದೇ ರೀತಿ ಭಯೋತ್ಪಾದನೆ ನಿರ್ಮೂಲನೆಯಾಗಲಿದೆ ಎಂದು ಅಶೋಕ್ ನುಡಿದರು.

ರಾಜ್ಯ ಸರಕಾರ ಕೇವಲ ಸುತ್ತೋಲೆ ಹೊರಡಿಸಿದರೆ ಸಾಲದು. ಗೃಹ ಸಚಿವರು ಹಾಗೂ ಪೆÇಲೀಸರು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜನರಲ್ಲಿ ವಿಶ್ವಾಸ ತುಂಬಬೇಕು. ಸಾಧ್ಯವಾದಷ್ಟು ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಮೇಲೆ ಜನರಿಗೆ ನಂಬಿಕೆ ಇಲ್ಲ. ಪಾಕಿಸ್ತಾನವನ್ನು ಕಾಂಗ್ರೆಸ್ ಪ್ರೀತಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅಶೋಕ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News