×
Ad

ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ನಿಧನ

Update: 2025-11-14 12:44 IST

ಬೆಂಗಳೂರು : ‘ವೃಕ್ಷಮಾತೆ' ಎಂದೇ ಪ್ರಖ್ಯಾತಿ ಗಳಿಸಿದ್ದ ಶತಾಯುಷಿ, ನಾಡೋಜ, ಪದ್ಮಶ್ರೀ ಪಶಸ್ತಿ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114) ಅವರು ತಮ್ಮ ವಯೋಸಹಜ ಕಾಯಿಲೆಯಿಂದಾಗಿ ಬೆಂಗಳೂರಿನ ಜಯನಗರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ತಿಮ್ಮಕ್ಕ ಅವರು ಪುತ್ರ ಪರಿಸರವಾದಿ ಉಮೇಶ್ ಬಳ್ಳೂರು(ಸಾಕುಮಗ)ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು ಹಾಗೂ ಅಭಿಮಾನಿ ಒಡನಾಡಿಗಳನ್ನು  ಅಗಲಿದ್ದಾರೆ.

ಬೆಂಗಳೂರು ನಗರದಲ್ಲಿ ತಮ್ಮ ಪುತ್ರನೊಂದಿಗೆ ನೆಲೆಸಿದ್ದ ಸಾಲುಮರದ ತಿಮ್ಮಕ್ಕ ಅವರ ಆರೋಗ್ಯದಲ್ಲಿ ಆಗಾಗ ಏರುಪೇರಾಗುತ್ತಿತ್ತು. ಎರಡು ದಿನಗಳ ಹಿಂದೆ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯನಗರದ ಅಪೊಲೊ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ ತಿಮ್ಮಕ್ಕ ಅವರು ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದ ಬಿಕ್ಕಲ ಚಿಕ್ಕಯ್ಯ ಎಂಬವರನ್ನು ಮದುವೆಯಾಗಿದ್ದರು. ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗೆ ಮಕ್ಕಳಿರಲಿಲ್ಲ. ಆ ಕೊರಗನ್ನು ಮರೆಯಲು ತಿಮ್ಮಕ್ಕ ಅವರು, ತಮ್ಮ ಊರಿನ ರಸ್ತೆ ಬದಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟರು. ಪ್ರತಿನಿತ್ಯ ನೀರು ಹಾಕಿ, ದನ-ಕರುಗಳು ಗಿಡಗಳನ್ನು ತಿನ್ನದಂತೆ ಪೋಷಿಸಿದರು. ಆ ಗಿಡಗಳು ಇದೀಗ ದೊಡ್ಡ ಮರಗಳಾಗಿ ಬೆಳೆದು ನಿಂತಿವೆ.

ಗಿಡಗಳನ್ನೇ ತನ್ನ ಮಕ್ಕಳಂತೆ ಪೋಷಿಸಿ ಬೆಳೆಸಿದ ತಿಮ್ಮಕ್ಕ ಅವರ ಸಾಧನೆಗೆ 2019ರಲ್ಲಿ ಕೇಂದ್ರ ಸರಕಾರ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ತಿಮ್ಮಕ್ಕ ಅವರ ಸಾಧನೆಗೆ ರಾಷ್ಟ್ರೀಯ, ಅಂತರ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಕರ್ನಾಟಕ ಸರಕಾರವು ಅವರನ್ನು ‘ಪರಿಸರ ರಾಯಭಾರಿ’ ಎಂದು ಘೋಷಿಸಿ, ಸಚಿವ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಗೌರವಿಸಿದೆ.

1995ರಲ್ಲಿ ಅವರಿಗೆ ರಾಷ್ಟ್ರೀಯ ನಾಗರಿಕ ಪ್ರಶಸ್ತಿಯು ಲಭಿಸಿತು. ಅಮೆರಿಕಾದ ಲಾಸ್ ಏಂಜಲೀಸ್ ಮತ್ತು ಓಕ್‍ಲ್ಯಾಂಡ್‍ನಲ್ಲಿರುವ ಪರಿಸರ ಶಿಕ್ಷಣ ಸಂಸ್ಥೆಗೆ ‘ತಿಮ್ಮಕ್ಕನ ಸಂಪನ್ಮೂಲಗಳು’ ಎಂಬುದಾಗಿ ತಿಮ್ಮಕ್ಕ ಅವರ ಹೆಸರಿಡಲಾಗಿದೆ. 

ಪ್ರಶಸ್ತಿಗಳು: ರಾಷ್ಟ್ರೀಯ ಪೌರ ಪ್ರಶಸ್ತಿ-1995, ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ-1997, ವೀರಚಕ್ರ ಪ್ರಶಸ್ತಿ-1997, ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಿಂದ ಶ್ಲಾಘನೆಯ ಪ್ರಮಾಣ ಪತ್ರ. ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ-2000, ಗಾಡ್‍ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ-2006, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ, ವನಮಾತೆ ಪ್ರಶಸ್ತಿ, ಮಾಗಡಿ ವ್ಯಕ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2010ರಲ್ಲಿ ಹಂಪಿ ಕನ್ನಡ ವಿವಿಯ ನಾಡೋಜ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಸಮಾಜ ಸೇವೆ: ತಿಮ್ಮಕ್ಕ ಕೇವಲ ಸಸಿಗಳನ್ನು ನೆಡುವುದು ಮಾತ್ರಲ್ಲದೆ, ಇತರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಪರಿಸರ ಸಂರಕ್ಷಣಾ ಅಭಿಯಾನದಲ್ಲಿ ಸಕ್ರಿಯವಾಗಿದ್ದರು. ಆಪೈಕಿ ತಮ್ಮ ಗ್ರಾಮದ ವಾರ್ಷಿಕ ಕಾರ್ಯಕ್ರಮಕ್ಕಾಗಿ ಮಳೆನೀರು ಸಂಗ್ರಹಣಾ ಟ್ಯಾಂಕ್ ನಿರ್ಮಿಸಿರುವುದು, ತಮ್ಮ ಗ್ರಾಮದಲ್ಲಿ ಆಸ್ಪತ್ರೆ ನಿರ್ಮಿಸಲು ಟ್ರಸ್ಟ್‌ ವೊಂದನ್ನು ಸ್ಥಾಪಿಸಿದ್ದಾರೆ. ಅಲ್ಲದೆ, ರಾಜ್ಯ-ದೇಶದ ವಿವಿಧೆಡೆಗಳಲ್ಲಿ ಸಸಿಗಳನ್ನು ನೆಡುವುದಕ್ಕೆ ಪ್ರೇರಕ ಶಕ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಸಾಲುಮರದ ತಿಮ್ಮಕ್ಕ ಅವಧ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ ಸೇರಿದಂತೆ ಸಚಿವರು, ಶಾಸಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News