×
Ad

‘ಋತುಚಕ್ರ ರಜೆ ನೀತಿ’ ಕಾನೂನು ಪಾಲನೆ ಮಾಡದವರ ವಿರುದ್ಧ ಕ್ರಮ : ಸಚಿವ ಸಂತೋಷ್ ಲಾಡ್

Update: 2025-10-11 18:40 IST

ಬೆಂಗಳೂರು, ಅ.11: ಋತುಚಕ್ರ ರಜೆಯನ್ನು ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರಕಾರ ಕಾನೂನು ಮಾಡಿದರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್ ಹೇಳಿದರು.

ಶನಿವಾರ ನಗರದಲ್ಲಿರುವ ತಮ್ಮ ಸರಕಾರಿ ನಿವಾಸದಲ್ಲಿ ಋತುಚಕ್ರ ರಜೆ ನೀತಿ ಜಾರಿಗೆ ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಲಭ್ಯವಾದ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸರಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೆ ಬೇಕು. ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೆ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಈ ರಜೆ ನೀತಿ ಜಾರಿ ಸಂಬಂಧ ಸ್ವಲ್ವ ದಿನದಲ್ಲಿ ಇನ್ನಷ್ಟು ಚರ್ಚೆ ಮಾಡಲಾಗುವುದು. ಸಮಾಲೋಚನೆ ನಡೆಸಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು.

ಋತುಚಕ್ರ ರಜೆ ಕೊಡಬೇಕು ಎಂಬ ಕಾರಣಕ್ಕೆ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಹೆಚ್ಚು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಒಮ್ಮೆ ಜಾರಿ ಮಾಡಿ ಅದರ ಸಾಧಕ ಬಾಧಕ ನೋಡೊಣ. ಹಾಗೆ ನೋಡಿದರೆ ಈ ರಜೆ ನೀತಿಯನ್ನು ಹಲವು ಕಂಪನಿಗಳು ಪಾಲಿಸುತ್ತೀವೆ ಎಂದು ಹೇಳಿದರು.

ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು ಎಂದು ಸಂತೋಷ್ ಲಾಡ್ ತಿಳಿಸಿದರು.

ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು. ಹೆಚ್ಚು ರಜೆ ಕೊಟ್ಟರೆ ಸಮಸ್ಯೆಯಾಗುತ್ತದೆ ಎಂಬ ದೂರುಗಳು ಬಂದಲ್ಲಿ ಅದನ್ನು ಪರಿಗಣಿಸಿ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ವಿವರಿಸಿದರು.

ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರು ಮನೆಗಳಲ್ಲಿ ದುಡಿಯುತ್ತಾರೆ, ಹೊರಗಡೆ ಕೆಲಸಕ್ಕೂ ಹೋಗುತ್ತಾರೆ. ಅವರ ಮೇಲೆ ಮಾನಸಿಕ ಒತ್ತಡ ಇರುತ್ತದೆ. ಮಧ್ಯಮ ವರ್ಗದ ದುಡಿಯುವ ಮಹಿಳೆಯರ ಸಮಸ್ಯೆ ಸಾಕಷ್ಟು ಇರುತ್ತವೆ. ಒಂದು ದಿನ ರಜೆ ಸಿಕ್ಕರೆ ಅವರು ಮಾರನೆ ದಿನ ಇನ್ನಷ್ಟು ದಕ್ಷವಾಗಿ ಕೆಲಸ ಮಾಡಬಲ್ಲರು ಎಂದು ಸಂತೋಷ್ ಲಾಡ್ ಹೇಳಿದರು.

ಋತುಚಕ್ರ ರಜೆ ನೀತಿ ಕುರಿತು ಅಧ್ಯಯನ ನಡೆಸಿದ್ದ ಸಮಿತಿಯ ಅಧ್ಯಕ್ಷೆ ಕ್ರೈಸ್ಟ್ ವಿಶ್ವವಿದ್ಯಾಲಯದ ಅಸೋಸಿಯೇಟ್ ಡೀನ್ ಡಾ.ಸಪ್ನಾ ಮಾತನಾಡಿ, ಋತುಚಕ್ರ ರಜೆ ನೀತಿಗೆ ಶಿಫಾರಸು ಮಾಡಲು ಸಾಕಷ್ಟು ಅಧ್ಯಯನ ನಡೆಸಿದ್ದೆವು. ಎಲ್ಲ ಮಾನದಂಡಗಳನ್ನು ಅಧ್ಯಯನ ಮಾಡಿಯೇ ಶಿಫಾರಸು ಮಾಡಿದ್ದೆವು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News