‘ವಿಶೇಷಚೇತನರಿಗೆ ಪ್ರತ್ಯೇಕ ನಿಗಮ-ಮಂಡಳಿ’ ರಚನೆಗೆ ಸಚಿವ ಸಂತೋಷ್ ಲಾಡ್ ಪತ್ರ
ಬೆಂಗಳೂರು : ಸರಕಾರದ ಸವಲತ್ತುಗಳನ್ನು ತ್ವರಿತವಾಗಿ ಮತ್ತು ನೇರವಾಗಿ ತಲುಪಿಸಲು ಸಾಧ್ಯವಾಗುವಂತೆ ವಿಶೇಷಚೇತನರಿಗಾಗಿಯೆ ಒಂದು ಪ್ರತ್ಯೇಕ ನಿಗಮ ಅಥವಾ ಮಂಡಳಿಯ ಸ್ಥಾಪನೆಯ ಅಗತ್ಯವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಪಾದಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಸದ್ಯ ವಿಶೇಷಚೇತನರ ಇಲಾಖೆಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿದೆ. ಈ ಇಲಾಖೆಯು ಬಹಳ ದೊಡ್ಡ ಇಲಾಖೆಯಾಗಿರುವುದರಿಂದ ತ್ವರಿತಗತಿಯಲ್ಲಿ ವಿಶೇಷಚೇತರ ಹಕ್ಕುಗಳ ಜಾರಿ ಸೂಕ್ತ ಕಾಲದಲ್ಲಿ ತಲುಪಿಸಲು ತೊಂದರೆಯಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಸರಕಾರವು ವಿಶೇಷಚೇತನರಿಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಿದ್ದರೂ ಆ ಹಕ್ಕುಗಳಿಗೆ ತಕ್ಕಂತೆ ಸೇವೆ ಒದಗಿಸಲು ವಿಳಂಬವಾಗುತ್ತಿರುವುದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವ್ಯಾಪ್ತಿ ಮತ್ತು ವಿಸ್ತಾರವೂ ಮತ್ತೊಂದು ಕಾರಣವಿರಬಹುದೆಂದು ಭಾವಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ಪ್ರತ್ಯೇಕ ನಿಗಮ ಅಥವಾ ಮಂಡಳಿಯನ್ನು ಸ್ಥಾಪಿಸಿದರೆ ಸವಲತ್ತುಗಳನ್ನು ನೇರವಾಗಿ ಮತ್ತು ತ್ವರಿತವಾಗಿ ತಲುಪಿಸಲು ಸಾಧ್ಯವಾಗುತ್ತದೆ. ಈ ಕುರಿತು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿಗೆ ಸಂತೋಷ್ ಲಾಡ್ ಕೋರಿದ್ದಾರೆ.