ಇವಿಎಂ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟಪಡಿಸುವವರೆಗೂ ಅನುಮಾನ ಇರುತ್ತೆ: ಸತೀಶ್ ಜಾರಕಿಹೊಳಿ
"ಬಿಹಾರ ಚುನಾವಣೆಯಲ್ಲಿ ನಮ್ಮ ಲೆಕ್ಕ ತಪ್ಪಿದೆ"
File Photo
ಬೆಳಗಾವಿ: ವಿದ್ಯುನ್ಮಾನ ಮತಯಂತ್ರ(ಇವಿಎಂ) ಬಗ್ಗೆ ಕೇಂದ್ರ ಸರಕಾರ, ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸುವವರೆಗೂ ಅನುಮಾನ ಇರಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರಂಭದಿಂದಲೂ ಇವಿಎಂ ಕುರಿತು ಅನುಮಾನವಿದೆ. ಅದು ಕೊನೆಯವರೆಗೂ ಇರುತ್ತದೆ. ಹಾಗಾಗಿ, ಕೇಂದ್ರ ಸರಕಾರ, ಕೇಂದ್ರ ಚುನಾವಣಾ ಆಯೋಗ ಅವರೇ ಅದಕ್ಕೆ ಇತಿಶ್ರೀ ಹಾಡಬೇಕು ಎಂದು ಒತ್ತಾಯಿಸಿದರು.
ಬಿಹಾರ ಚುನಾವಣೆಯಲ್ಲಿ ನಮ್ಮ ಲೆಕ್ಕ ತಪ್ಪಿದೆ. ಸರಿಯಾಗಿ ತಂತ್ರಗಾರಿಕೆ ಮಾಡುವಲ್ಲಿ ವಿಫಲರಾದೆವು. ಹಾಗಾಗಿ, ಈ ರೀತಿಯ ಫಲಿತಾಂಶ ಬಂದಿದೆ. ಎಲ್ಲರೂ ಗೆಲ್ಲುವ ಆಸೆ ಇಟ್ಟುಕೊಂಡಿದ್ದೆವು. ಹರಿಯಾಣದಲ್ಲೂ ಬಹಳ ಹತ್ತಿರದಿಂದ ಸೋತಿದ್ದೇವೆ. ಅದೇ ರೀತಿ ಕೆಲವು ರಾಜ್ಯಗಳಲ್ಲಿ ಬಹಳ ಅಂತರದಿಂದ ಸೋಲು ಕಂಡಿದ್ದೇವೆ. ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ ಎಂದು ಅವರು ನುಡಿದರು.
ಕಿತ್ತೂರು ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣಮೃಗಗಳು ಮೃತಪಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಾಥಮಿಕ ಮಾಹಿತಿ ಪ್ರಕಾರ ಒಂದು ರೋಗದಿಂದ ಸಾವನ್ನಪ್ಪಿವೆ ಎಂದು ಗೊತ್ತಾಗಿದೆ. ಸಂಬಂಧಪಟ್ಟ ತಜ್ಞರು ಆಗಮಿಸಿ ವರದಿ ಕೊಟ್ಟ ಮೇಲೆ ಯಾವ ಕಾರಣಕ್ಕೆ ಮೃತಪಟ್ಟಿವೆ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.
ನ.13ರಂದು 8 ಕೃಷ್ಣಮೃಗಗಳು ಮೃತಪಟ್ಟಾಗಲೇ ಮೃಗಾಲಯ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಅದು ತನಿಖೆಯಿಂದ ಗೊತ್ತಾಗಬೇಕು. ಈಗಾಗಲೇ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ವರದಿ ಬಂದ ಮೇಲೆ ಯಾರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಅಲ್ಲಿಯವರೆಗೂ ಕಾಯಬೇಕು ಎಂದರು.
ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಆಗಬೇಕೆಂದು ಶಾಸಕ ರಾಜು ಕಾಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಯಿಸಿ, ಅದು ಅವರ ವಿಚಾರ. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಎಲ್ಲರ ಅಭಿಪ್ರಾಯವೂ ಅಲ್ಲ ಎಂದು ಅಭಿಪ್ರಾಯಪಟ್ಟರು.